‘ಸಿಡಿ’ ಧಾರಾವಾಹಿಯ ಮಹಾನಾಯಕನನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ: ಹೆಚ್.ಡಿ.ಕುಮಾರಸ್ವಾಮಿ
ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ತಾವೇ ಸಿಲುಕಿಸಿಕೊಂಡಿದ್ದೇಕೆ ಎಂದು ಗೊತ್ತಾಗಲಿಲ್ಲ. ಈ ಪ್ರಕರಣದಲ್ಲಿ ಅವರ ಹೆಸರನ್ನು ಯಾರಾದರೂ ಹೇಳಿದ್ದಾರಾ? ಅವರೇಕೆ ಹಾಗೆ ಊಹೆ ಮಾಡಿಕೊಂಡರೋ? ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕುಹಕವಾಡಿದ್ದಾರೆ.
ರಾಮನಗರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಹಿಂದೆ ‘ಮಹಾನಾಯಕ’ರ ಕೈವಾಡ ಇದೆ ಎಂಬ ಮಾತು ಈಗಾಗಲೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದೀಗ ಈ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ತಾವೇ ಸಿಲುಕಿಸಿಕೊಂಡಿದ್ದೇಕೆ ಎಂದು ಗೊತ್ತಾಗಲಿಲ್ಲ. ಈ ಪ್ರಕರಣದಲ್ಲಿ ಅವರ ಹೆಸರನ್ನು ಯಾರಾದರೂ ಹೇಳಿದ್ದಾರಾ? ಅವರೇಕೆ ಹಾಗೆ ಊಹೆ ಮಾಡಿಕೊಂಡರೋ? ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಡಿ.ಕೆ ಶಿವಕುಮಾರ್ ಹೆಸರು ಸಿಡಿ ಪ್ರಕರಣದಲ್ಲಿ ಪ್ರಸ್ತಾಪವಾದ ಕುರಿತು ಮಾತನಾಡಿ, ಯಾಕೆ ಅವರ ಹೆಸರು ತಂದುಕೊಂಡರು ಎಂಬುದು ಗೊತ್ತಿಲ್ಲ. ಅವರೇ ಮಾಡಿದ್ದಾರೆ ಎಂದು ಯಾರದರೂ ಹೇಳಿದ್ದಾರಾ? ಜಾರಕಿಹೊಳಿ ಹೇಳಿದ್ರಾ ಅಥವಾ ಮಾಧ್ಯಮದವರು ಏನಾದ್ರು ಹೇಳಿದ್ರಾ? ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಮಹಾನಾಯಕನ ಬಗ್ಗೆ ನಾನು ಸಹ ಕುತೂಹಲದಿಂದ ಕಾಯುತ್ತಿದ್ದೇನೆ. ಇದು ಯಾವುದೋ ಧಾರಾವಾಹಿಯಂತೆ ಇದೆ. ಅಂತಿಮವಾಗಿ ಯಾರಿಗೆ ಸುತ್ತಿಕೊಳ್ಳುತ್ತೋ ನೋಡಬೇಕು. ಇಂತಹ ವೈಯಕ್ತಿಕ ವಿಚಾರಗಳಿಗೆ ನಾವು ತಲೆ ಹಾಕಲ್ಲ. ರಾಜ್ಯದಲ್ಲಿ ಇದಕ್ಕಿಂತ ಜನರ ಸಮಸ್ಯೆಗಳೇ ಹೆಚ್ಚಾಗಿವೆ. ನಾವು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಗಮನ ನೀಡುತ್ತೇವೆಯೇ ಹೊರತು ಅದು ಬಿಟ್ಟು ವೈಯಕ್ತಿಕ ಲಾಭಕ್ಕಾಗಿ ಸಣ್ಣತನಕ್ಕೆ ಇಳಿಯಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣ ಸಾರ್ವಜನಿಕರಿಗೆ ನಗೆಪಾಟಲಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಸಾಗುತ್ತಿರುವ ಧಾರಾವಾಹಿ ರೀತಿ ಇದೆ. ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳು, ಜನರ ಸಮಸ್ಯೆಗಳ ಬಗ್ಗೆ ದೊಡ್ಡ ಸವಾಲುಗಳಿವೆ. ಅದರ ಬಗ್ಗೆ ಗಮನ ಕೊಡಬೇಕು. ಈ ರೀತಿಯ ಘಟನೆಗಳಿಂದ ನಾವು ವೈಯಕ್ತಿಕ ಲಾಭ ಪಡೆಯಬೇಕು ಎಂಬ ಸಣ್ಣತನಕ್ಕೆ ನಾವಂತೂ ಇಳಿಯುವುದಿಲ್ಲ ಎಂದಿದ್ದಾರೆ.
ಅಂತೆಯೇ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಕಾಂಗ್ರೆಸ್ ಜತೆ ಮೈತ್ರಿಯಿಂದ ಜೆಡಿಎಸ್‌ಗೆ ಹಿನ್ನೆಡೆಯಾಗಿದೆ. ನನ್ನ ಕ್ಷೇತ್ರದಲ್ಲಿಯೂ ಹಿನ್ನೆಡೆಯಾಗಿದೆ. ರಾಮನಗರ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ, ನಮ್ಮ ಭದ್ರಕೋಟೆಯನ್ನೇ ಅಲುಗಾಡಿಸಲು ಕಾಂಗ್ರೆಸ್ ಯತ್ನಿಸಿದೆ. ಮೈತ್ರಿಯಿಂದಾಗಿ ನಮ್ಮ ಬೇಸ್‌ನ ಒಳಹೋಗಲು ಕಾಂಗ್ರೆಸ್ಗೆ ಸಾಧ್ಯವಾಗಿದೆ. ಚಿತ್ರದುರ್ಗ ಕೋಟೆಗೆ ಹೈದರಾಲಿ ಸೈನಿಕರು ನುಗ್ಗಿದಂತೆ, ಉಪಚುನಾವಣೆ ಹೆಸರಲ್ಲಿ ಕಾಂಗ್ರೆಸ್‌ನವರು ನುಗ್ಗಿದ್ದು ನನ್ನ ಕ್ಷೇತ್ರದಲ್ಲಿಯೇ ನನ್ನ ಬುಡಕ್ಕೆ ತಂದಿಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇಷ್ಟಾದರೂ ರಾಮನಗರದಲ್ಲಿ ನನಗೆ ಯಾವುದೇ ಹೆದರಿಕೆ ಇಲ್ಲ. ಮೈತ್ರಿ ಸರ್ಕಾರದಿಂದ ರೈತರಿಗೆ ಸಹಾಯವಾಯಿತು ಎಂಬ ಸಮಾಧಾನವಿದೆ. ಇನ್ನು ಬೇಕಿದ್ದರೆ ಜೆಡಿಎಸ್ ಶಾಸಕರು, ಮುಖಂಡರನ್ನು ಕಾಂಗ್ರೆಸ್ ಸೆಳೆಯಲಿ ಅದರಿಂದ ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಾಯಕರುಗಳು ಬರುತ್ತಾರೆ, ಹೋಗುತ್ತಾರೆ. ಆದ್ರೆ ನಾಯಕರನ್ನ ಸೃಷ್ಠಿ ಮಾಡೋರೋ ಸಣ್ಣ ಮಟ್ಟದ ಕಾರ್ಯಕರ್ತರು ಬಹಳ ಮುಖ್ಯ. ಅವರು ನಮ್ಮೊಂದಿಗಿರುವುದರಿಂದ ಕಾಂಗ್ರೆಸ್, ಬಿಜೆಪಿ ಏನೇ ಮಾಡಿದರೂ ನಾವು ಅಸ್ತಿತ್ವದಲ್ಲಿರುತ್ತೇವೆ ಎಂದು ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.