ಪ್ರೇಮ್ ಧ್ವನಿಯಲ್ಲಿ ಮತ್ತೆ ತಾಯಿ ಸೆಂಟಿಮೆಂಟ್ ಗೀತೆ; ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಹಾಡು ಕೇಳಿ
‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾದಲ್ಲಿ ಅಜಿತ್ ಜಯರಾಜ್ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಜೋಗಿ ಪ್ರೇಮ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ತಾಯಿ ಸೆಂಟಿಮೆಂಟ್ ಇರುವ ಈ ಗೀತೆಯನ್ನು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ.

ನಿರ್ದೇಶಕ ಪ್ರೇಮ್ (Jogi Prem) ಅವರ ಧ್ವನಿಯಲ್ಲಿ ‘ಜೋಗಿ’, ‘ಎಕ್ಸ್ಕ್ಯೂಸ್ ಮೀ’ ಸಿನಿಮಾಗಳ ತಾಯಿ ಸೆಂಟಿಮೆಂಟ್ ಗೀತೆಗಳು (Mother Sentiment Song) ಸೂಪರ್ ಹಿಟ್ ಆದವು. ಈಗ ಅವರ ಕಂಠದಲ್ಲಿ ಇನ್ನೊಂದು ಹೊಸ ಹಾಡು ಮೂಡಿಬಂದಿದೆ. ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾದ ಈ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ‘ಕ್ಷಮಿಸು ತಾಯೇ..’ ಎಂಬ ಈ ಹಾಡಿಗೆ ವಿಜೇತ್ ಮಂಜಯ್ಯ ಅವರು ಸಂಗೀತ ನೀಡಿದ್ದಾರೆ. ಆನಂದರಾಜ್ ನಿರ್ದೇಶನ ಮಾಡಿರುವ ‘ಜಾಂಟಿ ಸನ್ ಆಫ್ ಜಯರಾಜ್’ (Jhonty Son Of Jayraj) ಸಿನಿಮಾದಲ್ಲಿ ಅಜಿತ್ ಜಯರಾಜ್, ನಿವಿಷ್ಕಾ ಪಾಟೀಲ್, ಶರತ್ ಲೋಹಿತಾಶ್ವ, ರಾಜವರ್ಧನ್, ಸೋನು ಪಾಟೀಲ್, ಕಿಶನ್, ಸಚ್ಚಿನ್ ಪುರೋಹಿತ್, ಮೈಕೋ ನಾಗರಾಜ್ ಮುಂತಾದ ಕಲಾವಿದರು ನಟಿಸಿದ್ದಾರೆ.
‘ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ..’ ಎಂದು ಶುರುವಾಗುವ ಈ ಗೀತೆಯನ್ನು ನಿರ್ದೇಶಕ ಆನಂದರಾಜ್ ಅವರು ಬರೆದಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ, ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಅವರು ಈ ಹಾಡನ್ನು ಬಿಡುಗಡೆ ಮಾಡಿದರು.
ಸುಗೂರು ಕುಮಾರ್ ಅವರು ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬೇರೆ ಕಡೆಗಳಲ್ಲಿ ತಪ್ಪು ಮಾಡಿದರೆ ನಾವು ತಕ್ಷಣ ಕ್ಷಮೆ ಕೇಳುತ್ತೇವೆ. ಆದರೆ ಅಮ್ಮನ ಬಳಿ ಕ್ಷಮಿಸು ಅಂತ ಕೇಳುವುದಿಲ್ಲ. ನಮ್ಮ ಸಿನಿಮಾದ ಮೂಲಕ ಎಲ್ಲ ತಾಯಂದಿರಿಗೂ ಕ್ಷಮೆ ಕೇಳುತ್ತೇವೆ. ಇದು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡು. ಅಂತಿಮವಾಗಿ ಅಮ್ಮನೇ ಸರ್ವಸ್ವ ಎಂದು ತಿಳಿದಾಗ ಹಿನ್ನಲೆಯಲ್ಲಿ ಈ ಸಾಂಗ್ ಬರುತ್ತದೆ’ ಎಂದು ನಿರ್ದೇಶಕರು ಈ ಹಾಡಿನ ಬಗ್ಗೆ ಮಾಹಿತಿ ನೀಡಿದರು.
‘ಕ್ಷಮಿಸು ತಾಯೇ..’ ಹಾಡು:
ಹಾಡು ಬಿಡುಗಡೆ ಬಳಿಕ ಯೋಗರಾಜ್ ಭಟ್ ಅವರು ಮಾತನಾಡಿದರು. ‘ಬದುಕಲ್ಲಿ ನಾವು ಏನೇ ತಪ್ಪು ಮಾಡಿದರೂ ಕ್ಷಮಿಸುವಂತಹ ಗುಣ ಇರುವುದು ತಾಯಿಗೆ ಮಾತ್ರ. ಈ ವಿಷಯ ಇಟ್ಟುಕೊಂಡು ಸಾಂಗ್ ಮಾಡಿದ ತಂಡಕ್ಕೆ ನನ್ನ ಅಭಿನಂದನೆಗಳು’ ಎಂದು ಅವರು ಹೇಳಿದರು. ಈ ವೇಳೆ ನಾಯಕ ನಟ ಅಜಿತ್ ಜಯರಾಜ್ ಅವರು ಭಾವುಕವಾಗಿ ಮಾತನಾಡಿದರು. ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರು ಹಾಡನ್ನು ಮೆಚ್ಚಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದನ್ನೂ ಓದಿ: ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ನಾಗೇಂದ್ರ ಪ್ರಸಾದ್, ಎಸ್. ನಾರಾಯಣ್, ತರುಣ ಸುಧೀರ್, ಶ್ರುತಿ, ವಿನೋದ್ ರಾಜ್, ತಬಲಾ ನಾಣಿ ಮುಂತಾದ ಸೆಲೆಬ್ರಿಟಿಗಳು ಕೂಡ ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಹೊಸ ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.