ಪ್ರೇಮ್ ಜೊತೆಗೆ ಸಿನಿಮಾ, ದರ್ಶನ್ ಹುಟ್ಟುಹಬ್ಬದಂದು ಸಿಕ್ಕಿತು ಸ್ಪಷ್ಟನೆ
Darshan Thoogudeepa-Prem: ನಟ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಕೆಲಸ ಮಾಡಿ ದಶಕಗಳೇ ಕಳೆದಿವೆ. ‘ಕರಿಯ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಈ ಇಬ್ಬರು ಕೆವಿಎನ್ ಪ್ರೊಡಕ್ಷನ್ ಸಿನಿಮಾಕ್ಕಾಗಿ ಒಂದಾಗಿದ್ದರು. ಆದರೆ ದರ್ಶನ್ ಜೈಲಿಗೆ ಸೇರಿದ ಬಳಿಕ ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ದರ್ಶನ್ ಹಾಗೂ ಪ್ರೇಮ್ರ ಸಿನಿಮಾದ ಬಗ್ಗೆ ಸ್ಪಷ್ಟನೆ ದೊರೆತಿದೆ.

ನಟ ದರ್ಶನ್, ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡು ಎಂಟು ತಿಂಗಳಿಗೂ ಹೆಚ್ಚು ಸಮಯವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಮುಂಚೆ ದರ್ಶನ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಚಿತ್ರೀಕರಣ 50 % ಹೆಚ್ಚು ಮುಗಿದಿತ್ತು, 2024 ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ದರ್ಶನ್ ಹಾಗೂ ಚಿತ್ರತಂಡಕ್ಕೆ ಇತ್ತು, ಆದರೆ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ, ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು. ಆದರೆ ಇಂದು ದರ್ಶನ್ ಹುಟ್ಟುಹಬ್ಬದಂದು ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ ಜೈಲಿಗೆ ಹೋಗುವ ಮುಂಚೆ ಒಪ್ಪಂದ ಮಾಡಿಕೊಂಡಿದ್ದ ಇನ್ನೊಂದು ಸಿನಿಮಾದ ಬಗ್ಗೆಯೂ ಅಪ್ಡೇಟ್ ಹೊರಬಿದ್ದಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ದರ್ಶನ್, ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ದರ್ಶನ್ ಹಾಗೂ ಪ್ರೇಮ್ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದ್ದಾರೆ ಎಂಬುದು ಸಹ ಖಾತ್ರಿ ಆಗಿತ್ತು. ಅಸಲಿಗೆ ದರ್ಶನ್ ಹಾಗೂ ಪ್ರೇಮ್ ನಡುವೆ ‘ಪುಡಾಂಗ್’ ವಿಚಾರಕ್ಕೆ ಮನಸ್ಥಾಪ ಮೂಡಿತ್ತು, ರಕ್ಷಿತಾ ಪ್ರೇಮ್ ಸಂಧಾನದ ಕಾರಣ ಆ ಮನಸ್ಥಾಪ ಸರಿಹೋಗಿ, ಮತ್ತೊಮ್ಮೆ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಕೆಲಸ ಮಾಡುವ ವಾತಾವರಣ ನಿರ್ಮಾಣ ಆಗಿತ್ತು.
ಆದರೆ ಅಷ್ಟರಲ್ಲಿ ದರ್ಶನ್ ಜೈಲಿಗೆ ಹೋದ ಕಾರಣಕ್ಕೆ ಪ್ರೇಮ್ ನಿರ್ದೇಶನದ ಸಿನಿಮಾ ನಿಂತು ಹೋಗಿದೆ ಎಂಬ ಮಾತುಗಳು ತುಸು ಜೋರಾಗಿಯೇ ಕೇಳಿ ಬಂದವು. ಕೆವಿಎನ್ ಪ್ರೊಡಕ್ಷನ್ ನವರು ದರ್ಶನ್ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಪ್ರೇಮ್, ಶಿವರಾಜ್ ಕುಮಾರ್ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದವು. ಆದರೆ ಇಂದು ದರ್ಶನ್ ಹುಟ್ಟುಹಬ್ಬದಂದು ದರ್ಶನ್-ಪ್ರೇಮ್ ಸಿನಿಮಾ ಸುದ್ದಿಗಳಿಗೆ ಸ್ಪಷ್ಟನೆ ದೊರೆತಿದೆ.
ಇದನ್ನೂ ಓದಿ:‘ದಿ ಡೆವಿಲ್’ ಟೀಸರ್ ಮೂಲಕ ಕ್ರೇಜ್ ಹೆಚ್ಚಿಸಿದ ದರ್ಶನ್
ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಕೆಲಸ ಮಾಡಲಿರುವ ಸಿನಿಮಾದ ಚಿತ್ರೀಕರಣ ಬಂದ್ ಆಗಿಲ್ಲ. ಇಂದು ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕೆವಿಎನ್ ಪ್ರೊಡಕ್ಷನ್ಸ್ನವರು ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಸಿನಿಮಾ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಪೋಸ್ಟರ್ನಲ್ಲಿ ಗಧೆಯ ಚಿತ್ರವಿದೆ. ದರ್ಶನ್ಗೆ ಹುಟ್ಟುಹಬ್ಬ ಕೋರುವ ಜೊತೆಗೆ ‘ಭರ್ಜರಿ ಎಕ್ಸೈಟ್ಮೆಂಟ್ಗೆ ಈಗಿನಿಂದಲೇ ರೆಡಿಯಾಗಿ’ ಎಂಬ ಸಾಲನ್ನು ಬರೆಯಲಾಗಿದೆ.
ಪ್ರೇಮ್ ನಿರ್ದೇಶನದ ‘ಕರಿಯ’ ಸಿನಿಮಾದಲ್ಲಿ ದರ್ಶನ್ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದಾದ ಬಳಿಕ ಪ್ರೇಮ್ ಮತ್ತು ದರ್ಶನ್ ಒಟ್ಟಿಗೆ ಕೆಲಸ ಮಾಡಿದ್ದೇ ಇಲ್ಲ. ಇಬ್ಬರ ನಡುವೆ ಮೂಡಿದ್ದ ಸಣ್ಣ-ಪುಟ್ಟ ಮನಸ್ಥಾಪಗಳಿಂದಾಗಿ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಆದರೆ ಇದೀಗ ಕೆವಿಎನ್ ಪ್ರೊಡಕ್ಷನ್ಸ್ ಈ ಇಬ್ಬರನ್ನು ಮತ್ತೊಮ್ಮೆ ಜೊತೆಗೆ ತಂದಿದೆ. ‘ಡೆವಿಲ್’ ಸಿನಿಮಾ ಬಿಡುಗಡೆ ಬಳಿಕ ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ