The Devil Teaser: ದಿ ಡೆವಿಲ್ ಸಿನಿಮಾ ಟೀಸರ್ ಬಿಡುಗಡೆ: ದರ್ಶನ್ ಹುಟ್ಟುಹಬ್ಬಕ್ಕೆ ಆ್ಯಕ್ಷನ್ ಝಲಕ್
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇಂದು (ಫೆಬ್ರವರಿ 16) ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಗಿಫ್ಟ್ ರೂಪದಲ್ಲಿ ಅಭಿಮಾನಿಗಳಿಗೆ ದಿ ಡೆವಿಲ್ ಟೀಸರ್ ಸಿಕ್ಕಿದೆ. ಈ ಸಿನಿಮಾ ಮೇಲೆ ದರ್ಶನ್ ಫ್ಯಾನ್ಸ್ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಟ ದರ್ಶನ್ ಅವರಿಗೆ ಇಂದು (ಫೆ.16) ಜನ್ಮದಿನದ ಸಂಭ್ರಮ. ಆದರೆ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡುತ್ತಿಲ್ಲ. ಅದಕ್ಕೆ ಅನಾರೋಗ್ಯ ಕಾರಣ. ಹಾಗಂತ ಅಭಿಮಾನಿಗಳ ವಲಯದಲ್ಲಿ ಸಡಗರ ಕಮ್ಮಿ ಆಗಿಲ್ಲ. ಆ ಸಂಭ್ರಮವನ್ನು ಜಾಸ್ತಿ ಮಾಡಲು ‘ದಿ ಡೆವಿಲ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಟೀಸರ್ ಮೂಲಕ ಆ ನಿರೀಕ್ಷೆಯನ್ನು ಡಬಲ್ ಮಾಡಲಾಗಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್ ವೈರಲ್ ಆಗುತ್ತಿದೆ.
‘ಕಾಟೇರ’ ಸಿನಿಮಾದ ಬಿಗ್ ಸಕ್ಸಸ್ ನಂತರ ದರ್ಶನ್ ಶುರು ಮಾಡಿದ ಸಿನಿಮಾ ‘ದಿ ಡೆವಿಲ್’. ಹಾಗಾಗಿ ಈ ಸಿನಿಮಾ ಮೇಲೆ ಇರುವ ನಿರೀಕ್ಷೆ ದೊಡ್ಡದು. ಶೂಟಿಂಗ್ ನಡೆಯುತ್ತಿರುವಾಗಲೇ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರು. ಹಾಗಾಗಿ ಹಲವು ತಿಂಗಳ ಕಾಲ ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಕೂಡ ಸಿಕ್ಕಿರಲಿಲ್ಲ. ಈಗ ಟೀಸರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ದಿ ಡೆವಿಲ್’ ಸಿನಿಮಾ ಟೀಸರ್:
‘ದಿ ಡೆವಿಲ್’ ಸಿನಿಮಾದ ಟೀಸರ್ನ ಅವಧಿ 1 ನಿಮಿಷ 4 ಸೆಕೆಂಡ್ ಇದೆ. ಇಡೀ ಟೀಸರ್ನಲ್ಲಿ ‘ಚಾಲೆಂಜ್’ ಎಂಬ ಪದ ಬಿಟ್ಟರೆ ಬೇರೆ ಯಾವುದೇ ಡೈಲಾಗ್ ಇಲ್ಲ. ಕೇವಲ ಆ್ಯಕ್ಷನ್ ಮೂಲಕವೇ ದರ್ಶನ್ ಅವರು ಅಬ್ಬರಿಸಿದ್ದಾರೆ. ಗನ್ ಹಿಡಿದು ಅವರು ಗತ್ತು ತೋರಿಸಿದ್ದಾರೆ. ಅವರ ಖದರ್ ನೋಡಿ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ಡಿ ಬಾಸ್ ಎಂದು ಕೂಗಿದವರಿಗೆ ಖಡಕ್ ತಿರುಗೇಟು ನೀಡಿದ ಪ್ರಥಮ್
ಚಿತ್ರತಂಡದವರು ಅಂದುಕೊಂಡಂತೆಯೇ ಆಗಿದ್ದರೆ 2024ರಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು 2ನೇ ಆರೋಪಿಯಾಗಿ ಜೈಲಿಗೆ ಹೋಗಿದ್ದರಿಂದ ಸಿನಿಮಾದ ಎಲ್ಲ ಕೆಲಸಗಳು ನಿಂತಿದ್ದವು. ಜಾಮೀನು ಸಿಕ್ಕ ನಂತರವೂ ದರ್ಶನ್ ಅವರು ಕೂಡಲೇ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಯಾಕೆಂದರೆ ಅವರಿಗೆ ಬೆನ್ನು ನೋವು ಇದೆ. ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟು ಬೇಗ ‘ದಿ ಡೆವಿಲ್’ ಸಿನಿಮಾವನ್ನು ನೋಡಬೇಕು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:08 am, Sun, 16 February 25