ಚನ್ನಪಟ್ಟಣ, ಅಕ್ಟೋಬರ್ 24: ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳ ನಾಯಕರ ಟಿಕೆಟ್ ಗುದ್ದಾಟವನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಪಡೆ ಸಿಪಿ ಯೋಗೇಶ್ವರ್‌ರನ್ನ ಪಕ್ಷಕ್ಕೆ ಸೆಳೆದಿದ್ದರ ಜತೆಗೆ, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ದಳಪತಿಗಳ ಸಾಮ್ರಾಜ್ಯ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದು, ಅಸಲಿ ಯುದ್ಧಕ್ಕೆ ರಣಕಹಳೆ ಊದಿದ್ದಾರೆ.
ಚನ್ನಪಟ್ಟಣದಲ್ಲೇ ತಂಗಿದ್ದ ಸಿಪಿವೈ ಮಂಗಳವಾರಪೇಟೆಯಲ್ಲಿರುವ ಬಸವನಗುಡಿಯಲ್ಲಿ ಪೂಜೆ ಸಲ್ಲಿಸಿ ಒಂದೂವರೆ ಕಿಲೋ ಮೀಟರ್ ಱಲಿ ನಡೆಸಿದರು. ಱಲಿಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡರು. ಱಲಿಯುದ್ದಕ್ಕೂ ಘೋಷಣೆ ಮೊಳಗಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಱಲಿಯಲ್ಲಿ ಪಾಲ್ಗೊಂಡರು.
ರೋಡ್ ಶೋ ವೇಳೆ ಹಿಂದೆ ನಿಂತಿದ್ದ ಸಿಪಿ ಯೋಗೇಶ್ವರ್‌ರನ್ನ ಗಮನಿಸಿದ ಸಿಎಂ ಮುಂದೆ ಕರೆದರು. ಈ ವೇಳೆ, ‘ಇರಲಿ ಪರವಾಗಿಲ್ಲ ನಿಲ್ಲಿ ಸರ್’ ಅಂತಾ ಯೋಗೇಶ್ವರ್ ಹೇಳಿದ್ದಾರೆ.
ರೋಡ್ ಶೋ ಮೂಲಕ ಚನ್ನಪಟ್ಟಣ ತಾಲೂಕು ಕಚೇರಿಗೆ ಆಗಮಿಸಿದ ಸಿಪಿ ಯೋಗೇಶ್ವರ್ ಉಮೇದುವಾರಿಕೆ ಸಲ್ಲಿಸಿದರು. ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು ಶಾಸಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ‘ಟಿವಿ9’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಬಿಜೆಪಿ ನನಗೆ ಟಿಕೆಟ್ ಕೊಡಲ್ಲ ಎಂಬುದು ಗೊತ್ತಿತ್ತು. ನಿನ್ನೆವರೆಗೂ ಕಾದಿದ್ದೆ ಎಂದರು. ಅಲ್ಲದೆ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು. ಒಂದೆರಡು ದಿನ ಕಾದಿದ್ದರೆ, ರಾಜಕೀಯವಾಗಿ ನನ್ನ ಮುಗಿಸುವ ಸಂಚು ಹೂಡಲಾಗಿತ್ತು ಎಂದು ಆರೋಪಿಸಿದರು.
ಸಿಪಿವೈ ಬಂದಿದ್ದಕ್ಕೆ ಚನ್ನಪಟ್ಟಣ ಕಾಂಗ್ರೆಸ್‌ನಲ್ಲಿ ಅಸಮಾಧಾನ ಎಂಬ ಚರ್ಚೆಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು. ಚನ್ನಪಟ್ಟಣದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಚನ್ನಪಟ್ಟಣ, ಸಂಡೂರು ಬೈ ಎಲೆಕ್ಷನ್: ಸಿಪಿ ಯೋಗೇಶ್ವರ್, ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್ ಟಿಕೆಟ್
ಸಂಡೂರು ಅಖಾಡದಿಂದ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದ್ದಾರೆ. ಸಂಡೂರಿನ ಎಪಿಎಂಸಿಯಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ ಮಾಜಿ ಸಚಿವ ನಾಗೇಂದ್ರ, ಸೇರಿದಂತೆ ಕೈ ನಾಯಕರು ಭಾಗಿಯಾಗಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Thu, 24 October 24