ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಮ್ಮತ್ತಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ರೈತ ಶಿವಣ್ಣ ಎಂಬುವವರ ತೋಟದಲ್ಲಿದ್ದ ಬಾಳೆ ಫಸಲು ನಾಶವಾಗಿದೆ. ನಿನ್ನೆ ರಾತ್ರಿ ರೈತ ಶಿವಣ್ಣ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟವನ್ನು ಸಂಪೂರ್ಣವಾಗಿ ನಾಶ ಮಾಡಿದ್ದು, ಆನೆ ದಾಳಿಯಿಂದ ಲಕ್ಷಾಂತರ ರೂಪಾಯಿ ಬಾಳೆ ನಾಶವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನ ಕಡೆಗೆ ಬಂದು ಹಾನಿ ಮಾಡುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದೆಡೆ ಕಾಡಾನೆಗಳು ದಾಳಿ ಇಡುತ್ತವೆ ಇನ್ನೊಂದೆಡೆ ಹುಲಿ, ಚಿರತೆಯಂತಹ ಪ್ರಾಣಿಗಳು ದಾಳಿ ಮಾಡುತ್ತಿವೆ. ಒಟ್ಟಾರೆ ಜನರು ಭಯದಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಇನ್ನು ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಒಂದೋ ಮಾನವರ ಮೇಲೆ ದಾಳಿ ಮಾಡುತ್ತವೆ ಇಲ್ಲ ರೈತರ ತೋಟ ಮತ್ತು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.
ಹಾಸನದಲ್ಲೂ ನಿಲ್ಲದ ಕಾಡಾನೆ ಹಾವಳಿ:
ಮಿತಿ ಮೀರಿದ ಕಾಡಾನೆ ಹಾವಳಿಗೆ ಹಾಸನ ಜಿಲ್ಲೆಯ ಜನತೆ ಕಂಗಾಲಾಗಿದ್ದು, ಹತ್ತು ವರ್ಷದಲ್ಲಿ 61 ಜನರು ಸಾವನ್ನಪ್ಪಿದ್ದು, 67 ಆನೆಗಳನ್ನು ಸೆರೆ ಹಿಡಿಯಲಾಗಿದೆ ಹಾಗೂ 60ಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿವೆ. ಇನ್ನು 19 ಕೋಟಿ ರೂಪಾಯಿ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಪರಿಹಾರ ಹುಡುಕಬೇಕಾದ ಸರ್ಕಾರದ ಜಾಣ ಕುರುಡುತನಕ್ಕೆ ಜನರು ಹೈರಾಣಾಗಿದ್ದಾರೆ. ಕಳೆದ 3 ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ 5 ಜನರು ಕಾಡಾನೆಗಳ ದಾಳಿಗೆ ಸಿಲುಕಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ಆನೆಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನ ಡಿಸಿ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡುವ ಹಂತಕ್ಕೆ ಸಮಸ್ಯೆ ಬಿಗಡಾಯಿಸಿದ್ದು, ಜಿಲ್ಲೆಯಲ್ಲಿ 2001 ರಿಂದ 2021ರ ವರೆಗೆ ಕಾಡಾನೆ ದಾಳಿಗೆ 61 ಅಮಾಯಕ ಜನರು ಬಲಿಯಾಗಿದ್ದಾರೆ. ಹಾಗೆಯೇ ಇದೇ ಹತ್ತು ವರ್ಷಗಳಲ್ಲಿ 67 ಕಾಡಾನೆಗಳನ್ನು ಜನರಿಗೆ ತೊಂದರೆ ಕೊಡುತ್ತಿವೆ ಎಂದು ಸೆರೆಹಿಡಿದು ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಕಾಡಾನೆ ಸಂಘರ್ಷಕ್ಕೆ ಜಿಲ್ಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಆನೆಗಳು ಕೂಡ ಬಲಿಯಾಗಿದ್ದು, ಮೂರು ದಶಕಗಳಿಂದ ಕಾಡುತ್ತಿರುವ ಆನೆಗಳ ಹಾವಳಿ ತಡೆಯುವುದಕ್ಕೆ ಸೋಲಾರ್ ಬೇಲಿ, ಆನೆ ಕಂದಕಗಳನ್ನ ಮಾಡಿ ಸುಸ್ತಾದ ಅರಣ್ಯ ಇಲಾಖೆ ಈಗ ಇದ್ಯಾವುದು ಪ್ರಯೋಜನ ಇಲ್ಲ ಎಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿದೆ.
ಒಟ್ಟಿನಲ್ಲಿ ನೀರಾವರಿ ಯೋಜನೆ, ರೈಲ್ವೆ ಯೋಜನೆ, ರಸ್ತೆ, ವಿದ್ಯುತ್ ಯೋಜನೆ ಅದು ಇದು ಎಂದು ಅಭಿವೃದ್ಧಿಯ ನೆಪದಲ್ಲಿ ಮನುಷ್ಯ ಮಾಡಿದ ಯಡವಟ್ಟು ಕಾಡು ಪ್ರಾಣಿಗಳ ನೆಲೆಯನ್ನೇ ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದೆ. ನಿತ್ಯ ನೂರಾರು ಕಿಲೋಮೀಟರ್ ನಡೆದಾಡುತ್ತಿದ್ದ ಆನೆಗಳು ಬದಲಾದ ಪರಿಸ್ಥಿತಿಯಲ್ಲಿ ನಾಡಿನಲ್ಲೇ ನೀರಿನ ಜೊತೆಗೆ ಪೌಷ್ಠಿಕ ಅಹಾರವೂ ಸಿಕ್ಕಿದ್ದರಿಂದ ಇಲ್ಲೇ ನೆಲೆ ಕಂಡುಕೊಂಡಿದ್ದು, ಇದೀಗ ಜನರ ಜೀವಕ್ಕೆ ಸಂಚಕಾರ ತರುತ್ತಿದೆ. ಜನರು ಹೇಳುವಂತೆ ಜಿಲ್ಲೆಯಲ್ಲಿರುವ 65 ಆನೆಗಳ ಸ್ಥಳಾಂತರವೇ ಇದಕ್ಕೆ ಪರಿಹಾರಾನಾ, ಇಲ್ಲ ಪರಿಸರವಾದಿಗಳು ಹೇಳುವಂತೆ ಆನೆ ಕಾರಿಡಾರ್ ಸಮಸ್ಯೆಗೆ ಪರಿಹಾರವಾಗುತ್ತಾ, ಅರಣ್ಯ ಇಲಾಖೆ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಇದೀಗ ಗಮನಿಸಬೇಕಿದೆ.
ಇದನ್ನೂ ಓದಿ:ಕಾಡಾನೆ ದಾಳಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಲಿ
ಇದನ್ನೂ ಓದಿ: ತಡರಾತ್ರಿ ಆಹಾರವ ಹುಡುಕಿ ಬಂದ ಕಾಡಾನೆ.. ಟ್ರಾನ್ಸ್ಫಾರ್ಮರ್ ಮೂಲಕ ವಿದ್ಯುತ್ ಪ್ರವಹಿಸಿ ಸಾವು