ನರಭಕ್ಷಕನನ್ನು ಹಿಡಿಯೋಕೆ ಆಗದಿದ್ರೆ ಹೇಳಿ, ನಾವೇ ಹುಲಿ ಮದುವೆ ಮಾಡ್ಕೋತೀವಿ: ಕೊಡಗು ಶಾಸಕರ ಆಕ್ರೋಶ
ಮೊದಲು ಆ ನರಭಕ್ಷಕ ಹುಲಿಯನ್ನ ಹಿಡಿಯಿರಿ. ನಿಮಗೆ ಆಗದಿದ್ದರೆ ಹೇಳಿ. ಹುಲಿ ಮದುವೆ ಮಾಡಿಕೊಳ್ತೇವೆ. ಹುಲಿ ಮದುವೆ ಏನು ಅನ್ನೋದನ್ನ ಆಮೇಲೆ ಹೇಳ್ತೇವೆ. ಈಗಾಗಲೇ ಮೂರ್ನಾಲ್ಕು ಜನರನ್ನು ಕೊಂದಿರುವ ಹುಲಿಯನ್ನು ಸೆರೆ ಹಿಡಿಯಲು ಆಗದಿದ್ದರೆ ನಾವೇ ಅದನ್ನು ಕೊಲ್ಲಬೇಕಾಗುತ್ತದೆ.
ಕೊಡಗು: ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಅಟ್ಟಹಾಸ ಮೇರೆಮೀರುತ್ತಿದ್ದು ಈಗಾಗಲೇ ಮೂವರನ್ನು ಬಲಿ ಪಡೆದಿದೆ. ಅಲ್ಲದೇ 12 ಜಾನುವಾರುಗಳು ಸಹ ಹುಲಿ ಬಾಯಿಗೆ ತುತ್ತಾಗಿರುವುದು ಊರಿನವರಲ್ಲಿ ಭಯ ಮೂಡಿಸಿದೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ ಕೊಡಗು ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ನರಭಕ್ಷಕ ಹುಲಿಯನ್ನು ಸದೆಬಡಿಯಲು ಆಗ್ರಹಿಸಿದರು. ಹುಲಿಯನ್ನು ಸೆರೆ ಹಿಡಿಯುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಆಕ್ರೋಶಿತರಾದ ಇಬ್ಬರೂ ನಿಮಗೆ ಆಗದಿದ್ದರೆ ನಮಗೆ ಬಿಡಿ, ಅದೇನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೇವೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಏರುಧ್ವನಿಯಲ್ಲಿ ಗುಡುಗಿದರು.
ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕೊಡಗು ಶಾಸಕರು, ಮೊದಲು ಆ ನರಭಕ್ಷಕ ಹುಲಿಯನ್ನ ಹಿಡಿಯಿರಿ. ನಿಮಗೆ ಆಗದಿದ್ದರೆ ಹೇಳಿ. ಹುಲಿ ಮದುವೆ ಮಾಡಿಕೊಳ್ತೇವೆ. ಹುಲಿ ಮದುವೆ ಏನು ಅನ್ನೋದನ್ನ ಆಮೇಲೆ ಹೇಳ್ತೇವೆ. ಈಗಾಗಲೇ ಮೂರ್ನಾಲ್ಕು ಜನರನ್ನು ಕೊಂದಿರುವ ಹುಲಿಯನ್ನು ಸೆರೆ ಹಿಡಿಯಲು ಆಗದಿದ್ದರೆ ನಾವೇ ಅದನ್ನು ಕೊಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೀವು ಕೊಲ್ಲುವಂತಿಲ್ಲ, ನಾನು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ ಶಾಸಕರ ಈ ಅಹವಾಲನ್ನು ಆಲಿಸಿದ ಅರಣ್ಯ ಸಚಿವರು, ಆ ರೀತಿ ನೀವೇ ಹುಲಿಯನ್ನು ಕೊಲ್ಲುವುದಿಕ್ಕೆ ಬರುವುದಿಲ್ಲ. ಅದನ್ನು ಶೂಟ್ ಮಾಡುವಂತೆ ನಾನು ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಸಮಸ್ಯೆಯ ಗಂಭೀರತೆ ಬಗ್ಗೆ ಅರಿವಿದೆ, ಹೀಗಾಗಿ ಶೀಘ್ರದಲ್ಲಿಯೇ ಪರಿಹಾರ ಒದಗಿಸಿಕೊಡಲಾಗುವುದು. ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ಭಯ ಬಿತ್ತಿದ ವ್ಯಾಘ್ರ ಕೆಲವು ದಿನಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿರುವ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ, ಹುಲಿ ದಾಳಿಯಿಂದಾಗಿ 10 ವರ್ಷದ ಬಾಲಕ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಗಾಯಾಳು ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದಕ್ಕೂ ಮೊದಲು ಇಂದು ಮುಂಜಾನೆ ಬೆಳ್ಳೂರು ಗ್ರಾಮದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಂದು ಹಸು ಸಾವನ್ನಪ್ಪಿ, ಮತ್ತೊಂದು ಹಸುವಿನ ಸ್ಥಿತಿ ಗಂಭೀರವಾಗಿತ್ತು. ಈ ಹುಲಿ ದಾಳಿಯಿಂದಾಗಿ 12 ದಿನದಲ್ಲಿ 12 ಜಾನುವಾರು ಮತ್ತು ಮೂವರು ವ್ಯಕ್ತಿಗಳು ಬಲಿಯಾಗಿದ್ದಾರೆ.
ಇದನ್ನೂ ಓದಿ: ಮಡಿಕೇರಿ ಹುಲಿ ಉಪಟಳ: 15ಕ್ಕೇರಿದ ಸಾವಿನ ಸಂಖ್ಯೆ.. ಇಂದು ಸಹ ಬಾಲಕ ಹುಲಿ ಬಾಯಿಗೆ ತುತ್ತು
ವರ್ಷದ ಹಿಂದೆ ಶಿಬಿರದಿಂದ ಓಡಿ ಹೋದ ಆನೆ: ಸೆರೆ ಹಿಡಿಯಲು ಮಡಿಕೇರಿಯ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ