ವರ್ಷದ ಹಿಂದೆ ಶಿಬಿರದಿಂದ ಓಡಿ ಹೋದ ಆನೆ: ಸೆರೆ ಹಿಡಿಯಲು ಮಡಿಕೇರಿಯ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ದುಬಾರೆ ಆನೆ ಶಿಬಿರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಜಗದ್ವಿಖ್ಯಾತ ಆಗಿರುವ ಈ ಆನೆ ಕ್ಯಾಂಪ್ನಲ್ಲಿ ಎಲ್ಲರಿಗೂ ತಳಮಳ ಶುರುವಾಗಿದೆ. ಯಾಕೆಂದರೆ ಈ ಆನೆ ಕ್ಯಾಂಪಿನಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ಆನೆ ಕುಶ ನಾಪತ್ತೆಯಾಗಿ ಒಂದು ವರ್ಷವೇ ಕಳೆದಿದೆ.
ಕೊಡಗು: ಡೆಡ್ಲಿ ಡೇಂಜರಸ್ ಆಗಿದ್ದ ಕುಶ ಎಂಬ ಹೆಸರಿನ ಆನೆಯೊಂದು ಕಾಡಿನಲ್ಲಿದ್ದಾಗ ಇಬ್ಬರನ್ನು ಕೊಂದು ಹಾಕಿತ್ತು. ಹಾಗಾಗಿ ಆನೆಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ವರ್ಷದ ಬಳಿಕ ಸುಧಾರಿಸಿಕೊಂಡು ಶಾಂತನಾಗಿದ್ದ ಕುಶನನ್ನ ಜೈಲಿನಿಂದ ಹೊರ ಬಿಡಲಾಗಿತ್ತು. ಆದರೆ ಆನೆ ಓಡಿಹೋಗಿದೆ. ಓಡಿಹೋಗಿ ವರ್ಷಗಳೆ ಕಳೆಯುತ್ತಾ ಬಂತು. ಸೆರೆ ಹಿಡಿಯುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಇನ್ನಿಲ್ಲದ ಕಷ್ಟಪಡುತ್ತಿದ್ದರು ಸಾಧ್ಯವಾಗುತ್ತಿಲ್ಲ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ದುಬಾರೆ ಆನೆ ಶಿಬಿರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಜಗದ್ವಿಖ್ಯಾತ ಆಗಿರುವ ಈ ಆನೆ ಕ್ಯಾಂಪ್ನಲ್ಲಿ ಎಲ್ಲರಿಗೂ ತಳಮಳ ಶುರುವಾಗಿದೆ. ಯಾಕೆಂದರೆ ಈ ಆನೆ ಕ್ಯಾಂಪಿನಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ಆನೆ ಕುಶ ನಾಪತ್ತೆಯಾಗಿ ಒಂದು ವರ್ಷವೇ ಕಳೆದಿದೆ. ಆದರೆ ಇದುವರೆಗೆ ತಿರುಗಿ ಬಂದಿಲ್ಲ. ಕುಶನನ್ನ ಕರೆದುಕೊಂಡು ಬರಲು ತೆರಳಿದ ಅಧಿಕಾರಿಗಳು ಬರಿಗೈಯಲ್ಲಿ ಮರಳಿದ್ದಾರೆ.
ಎರಡು ವರ್ಷಗಳ ಹಿಂದೆ ಸುಂಟಿಕೊಪ್ಪ ಸಮೀಪ ಸೆರೆ ಹಿಡಿಯಲಾಗಿದ್ದ ಈ ಆನೆಯನ್ನ ದುಬಾರೆಯಲ್ಲೇ ಪಳಗಿಸಿ ಕುಶ ಅಂತ ನಾಮಕರಣ ಮಾಡಲಾಗಿತ್ತು. ಆತನೂ ಶಿಬಿರದ ಉಳಿದ ಆನೆಗಳೊಂದಿಗೆ ಚೆನ್ನಾಗಿಯೇ ಹೊಂದಿಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಮದವೇರಿ ಸರಪಳಿ ತುಂಡರಿಸಿಕೊಂಡು ಸಂಗಾತಿ ಅರಸಿ ಆತ ಕಾಡು ಹತ್ತಿಬಿಟ್ಟಿದ್ದ. ಅಂದಿನಿಂದ ಇಂದಿನವರೆಗೆ ಈ ಆನೆ ಶಿಬಿರಕ್ಕೆ ಮರಳಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಕಾಣ ಸಿಕ್ಕರೂ ಮನುಷ್ಯರ ಧ್ವನಿ ಕೇಳುತ್ತಿದ್ದಂತೆ ಅಲ್ಲಿಂದ ಕಾಲು ಕೀಳುತ್ತದೆಯಂತೆ. ಕೈಗೆ ಸಿಕ್ಕಿ ಹಾಕಿಕೊಂಡರೆ ಮತ್ತೆ ಎಲ್ಲಿ ನನ್ನನ್ನ ಬಂಧಿ ಮಾಡುತ್ತಾರೋ ಎನ್ನುವ ಭಯದಿಂದ ಕುಶ ಯಾರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಾ ಇದ್ದಾನೆ.
ದಾಳಿ ಮಾಡುವ ಆತಂಕ ಒಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕುಶನ ಹುಡುಕಾಟಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಆದರೂ ಕೂಡ ಕುಶ ಮಾತ್ರ ಕಾಡು ಬಿಟ್ಟು ಆನೆ ಶಿಬಿರಕ್ಕೆ ಬರುತ್ತಿಲ್ಲ. ಈ ಆನೆ ಮತ್ತೆ ಎಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತದೆಯೋ ಎನ್ನುವ ಆತಂಕವೂ ಕಾಡಂಚಿನ ಗ್ರಾಮಸ್ಥರನ್ನ ಕಾಡಲಾರಂಭಿಸಿದೆ. ಅಲ್ಲದೆ ಎರಡು ವರ್ಷಗಳ ಹಿಂದೆ ಕುಶನನ್ನು ಕಾಡಿನಲ್ಲಿ ಸೆರೆ ಹಿಡಿಯಲು ಲಕ್ಷಾಂತರ ರೂ. ವೆಚ್ಚವಾಗಿದೆ. ಇದೀಗ ಈ ಆನೆ ಮತ್ತೆ ಕಾಡು ಸೇರಿರುವುದು ಸರ್ಕಾರದ ದುಡ್ಡನ್ನ ಪೋಲು ಮಾಡಿದಂತಾಗಿದೆ. ಹಾಗಾಗಿ ಈ ಆನೆಯನ್ನ ಸೆರೆ ಹಿಡಿದು ಸಮಸ್ಯೆ ಬಗೆಹರಿಸುವಂತೆ ನಾಗರಿಕರಲ್ಲಿ ಒತ್ತಾಯವೂ ಕೇಳಿ ಬಂದಿದೆ.
ಆನೆ ತಪ್ಪಿಸಿಕೊಂಡ ಒಂದು ತಿಂಗಳಲ್ಲೇ ಗಂಭೀರವಾಗಿ ಪ್ರಯತ್ನಿಸಿದ್ದರೆ ಕುಶನನ್ನ ಮತ್ತೆ ಸುಲಭವಾಗಿ ಕಾಡಿನಿಂದ ತರಬಹುದಾಗಿತ್ತು. ಆದರೆ ಇದೀಗ ವರ್ಷ ಕಳೆದಿರುವುದರಿಂದ ಅದು ಮತ್ತೆ ಕಾಡಾನೆಯಾಗಿಯೇ ಬದಲಾಗಿರುತ್ತದೆ. ಹಾಗಾಗಿ ಅದನ್ನು ಹಿಡಿಯುವುದು ಅಂದರೆ ಅಷ್ಟು ಸುಲಭವಿಲ್ಲ. ಮತ್ತೆ ಕಾಡಾನೆ ಸೆರೆ ಹಿಡಿದಂತೆಯೇ ಹಿಡಿದು ಶಿಬಿರದಲ್ಲಿ ಹಲವು ತಿಂಗಳು ಪಳಗಿಸಬೇಕಾಗುತ್ತದೆ. ಇದಕ್ಕೆಲ್ಲ ಮತ್ತೆ ಹಲವು ಲಕ್ಷ ವೆಚ್ಚವಾಗುತ್ತದೆ. ಒಂದೆಡೆ ಅರಣ್ಯ ಇಲಾಖೆ ಸಿಬ್ಬಂದಿಯ ಶ್ರಮ ವ್ಯರ್ಥವಾಗುತ್ತಿದ್ದರೆ ಮತ್ತೊಂದೆಡೆ ಸರ್ಕಾರದ ಹಣವೂ ಪೋಲಾಗುತ್ತಿದೆ ಎನ್ನುವುದು ನಾಗರಿಕರ ವಾದವಾಗಿದೆ.
ಇದನ್ನೂ ಓದಿ
Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್
ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: ಕುಖ್ಯಾತ ದಂತಚೋರರ ಬಂಧನ, ಆನೆ ದಂತ ವಶ
Published On - 1:36 pm, Thu, 4 March 21