ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನಾಭರಣ ವಾಪಸ್ ನೀಡದೆ ವಂಚನೆ; ಫೈನಾನ್ಸ್ ಮಾಲೀಕ ಅರೆಸ್ಟ್
ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನಾಭರಣ ವಾಪಸ್ ನೀಡದೆ ವಂಚನೆ ಮಾಡಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್(42) ಬಂಧನಕ್ಕೆ ಒಳಗಾಗಿದ್ದಾರೆ.
ಮೈಸೂರು: ಗಿರವಿ ಇಟ್ಟ ಚಿನ್ನಾಭರಣ ವಾಪಸ್ ನೀಡದೆ ವಂಚನೆ ಮಾಡಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್(42) ಬಂಧನಕ್ಕೆ ಒಳಗಾಗಿದ್ದಾರೆ. ಬಂಧನಕ್ಕೊಳಗಾದ ಮಂಜುನಾಥ್ ಅವರಿಂದ 580 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಗನಿಗೆ ಕಾರು ಕೊಡಿಸಲು ಮಹಿಳೆಯೊಬ್ಬರು ಮುಂದಾಗಿದ್ದು, ಹಣದ ಅವಶ್ಯಕತೆ ಇದ್ದ ಕಾರಣ ಸಾಲ ಪಡೆಯಲು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ, ತಮ್ಮ ಚಿನ್ನಾಭರಣವನ್ನು ಅಡವಿಡಲು ಯೋಚಿಸಿದ್ದಾರೆ. ಇರ್ವಿನ್ ರಸ್ತೆಯ ಬಾಲಾಜಿ ಗೋಲ್ಡ್ ಫೈನಾನ್ಸ್‌ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಗಿರವಿ ಇಟ್ಟು ಸಾಲ ನೀಡುವುದಾಗಿ ಆಮಿಷ ಒಡ್ಡಿ ಮಾಲೀಕ ಮಂಜನಾಥ್ ವಂಚನೆ ಮಾಡಿದ್ದಾರೆ. ವಂಚನೆ ಪ್ರಕರಣ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಂಚಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಯಿಂದ 22 ಲಕ್ಷ 35 ಸಾವಿರ ಮೌಲ್ಯದ 580 ಗ್ರಾಂ ಚಿನ್ನದ ಆಭರಣವನ್ನು ವಶಕ್ಕೆ ಪಡೆಯಲಾಗಿದೆ.
ಮಂಜುನಾಥ್ ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದವನು. ಈತ ಮೈಸೂರಿನ ಹೃದಯಭಾಗ ಇರ್ವೀನ್ ರಸ್ತೆಯಲ್ಲಿ ಬಾಲಾಜಿ ಗೋಲ್ಡ್ ಫೈನಾನ್ಸ್ ಹೆಸರಿನ ಸಂಸ್ಥೆ ತೆರೆದಿದ್ದ. ಚಿನ್ನ ಗಿರವಿ ಇಟ್ಟುಕೊಂಡು ಕಡಿಮೆ ಬಡ್ಡಿ ದರಕ್ಕೆ ಸಾಲ ಕೊಡುವುದಾಗಿ ಜಾಹೀರಾತು ನೀಡುತ್ತಿದ್ದ. ಈತನ ಜಾಹೀರಾತು ಬಣ್ಣ ಬಣ್ಣದ ಮಾತುಗಳನ್ನು ನಂಬಿಕೊಂಡು ಸಾಕಷ್ಟು ಜನ ಈತನ ಬಳಿ ಚಿನ್ನಾಭರಣ ಗಿರವಿ ಇಟ್ಟಿದ್ದರು.
ಅಷ್ಟೇ ಅಲ್ಲ ಬಡ್ಡಿಯನ್ನು ಕಟ್ಟುತ್ತಿದ್ದರು. ಸ್ವಲ್ಪ ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಾಪತ್ತೆಯಾಗಿಬಿಟ್ಟಿದ್ದ. ಅಷ್ಟೇ ಅಲ್ಲ ಸಂಸ್ಥೆಗೂ ಬೀಗ ಬಿದ್ದಿತ್ತು. ಇದರಿಂದ ಗಾಬರಿಯಾದ ಗಿರವಿ ಇಟ್ಟಿದ್ದವರು ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಮೋಸ ಮಾಡಿದ್ದ ಮಂಜುನಾಥ್‌ನನ್ನು ಬಂಧಿಸಿ 22 ಲಕ್ಷ 35 ಸಾವಿರ ಮೌಲ್ಯದ 580 ಗ್ರಾಂ ಚಿನ್ನದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಖದೀಮರಿಗೆ ಧರ್ಮದೇಟು.. ಸ್ವಯಂ ಚಾಕು ಇರಿದುಕೊಂಡು ಅಸ್ವಸ್ಥನಾದ ಕಳ್ಳ
ಇದನ್ನೂ ಓದಿ: ಈ ರಾಜ್ಯದಲ್ಲಿ ಹಸುವಿನ ಸಗಣಿ ಅತ್ಯಮೂಲ್ಯ ವಸ್ತು; ಕಳ್ಳತನ ಆಗದಂತೆ ತಪ್ಪಿಸಲು ಸಿಸಿಟಿವಿ ಕ್ಯಾಮರಾ ಕಣ್ಗಾವಲು