Tv9 Digital Live | ರಮೇಶ್ ಜಾರಕಿಹೊಳಿ ಮಂತ್ರಿಗಿರಿ ಹೋಗಲು ರಾಜಕೀಯ ವೈಷಮ್ಯ ಕಾರಣವೇ?

ರಾಜಕೀಯ ವೈಷಮ್ಯ ರಮೇಶ್ ಜಾರಕಿಹೊಳಿ ಅವರ ಮಂತ್ರಿಗಿರಿಯನ್ನು ನುಂಗಿತಾ? ಹಾಗಿದ್ದರೆ ರಾಜಕೀಯ ವೈಷಮ್ಯಕ್ಕೆ ಮಿತಿ ಇಲ್ಲವೇ? ರಾಜಕೀಯ ವೈಷಮ್ಯದ ದಳ್ಳುರಿಯಲ್ಲಿ ತತ್ವಾಧಾರಿತ ರಾಜಕೀಯಕ್ಕೆ ಜಾಗವಿದೆಯೆ? ಇಂಥ ಸನ್ನಿವೇಶದಲ್ಲಿ ಮತದಾರ ಏನು ಮಾಡಬೇಕು?

Tv9 Digital Live | ರಮೇಶ್ ಜಾರಕಿಹೊಳಿ ಮಂತ್ರಿಗಿರಿ ಹೋಗಲು ರಾಜಕೀಯ ವೈಷಮ್ಯ ಕಾರಣವೇ?
ಕಾಂಗ್ರೆಸ್​ನ ಮಾಧ್ಯಮ ವಕ್ತಾರ ಬ್ರಿಜೇಶ್​ ಕಾಳಪ್ಪ, ಬಿಜೆಪಿ ಮಾಧ್ಯಮ ವಕ್ತಾರ ಗೋ. ಮಧುಸೂದನ್ ಹಾಗೂ ಪತ್ರಕರ್ತ ಹೃಷಿಕೇಶ್​ ಬಹದ್ದೂರ್
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 04, 2021 | 6:51 PM

ರಾಜಕೀಯ ವೈಷಮ್ಯ ರಮೇಶ್ ಜಾರಕಿಹೊಳಿ ಅವರ ಮಂತ್ರಿಗಿರಿಯನ್ನು ನುಂಗಿತಾ? ಹಾಗಿದ್ದರೆ ರಾಜಕೀಯ ವೈಷಮ್ಯಕ್ಕೆ ಮಿತಿ ಇಲ್ಲವೇ? ರಾಜಕೀಯ ವೈಷಮ್ಯದ ದಳ್ಳುರಿಯಲ್ಲಿ ತತ್ವಾಧಾರಿತ ರಾಜಕೀಯಕ್ಕೆ ಜಾಗವಿದೆಯೆ? ಇಂಥ ಸನ್ನಿವೇಶದಲ್ಲಿ ಮತದಾರ ಏನು ಮಾಡಬೇಕು.. ಎಂಬ ವಿಷಯದ ಬಗ್ಗೆ ಗುರುವಾರ ‘ಟಿವಿ9 ಕನ್ನಡ ಡಿಜಿಟಲ್​ ಲೈವ್​’ನಲ್ಲಿ ಸಂವಾದ ನಡೆಯಿತು. ಆ್ಯಂಕರ್ ಹರಿಪ್ರಸಾದ್​ ಚರ್ಚೆ ನಡೆಸಿಕೊಟ್ಟರು. ಕಾಂಗ್ರೆಸ್​ನ ಮಾಧ್ಯಮ ವಕ್ತಾರ ಬ್ರಿಜೇಶ್​ ಕಾಳಪ್ಪ, ಹಿರಿಯ ಪತ್ರಕರ್ತ ಹೃಷಿಕೇಶ್​ ಬಹದ್ದೂರ್ ದೇಸಾಯಿ ಹಾಗೂ ಬಿಜೆಪಿ ಮಾಧ್ಯಮ ವಕ್ತಾರ ಗೋ. ಮಧುಸೂದನ್ ಸಂವಾದದಲ್ಲಿ​ ಪಾಲ್ಗೊಂಡಿದ್ದರು.

ರಾಜಕಾರಣದ ಕುರಿತಾಗಿ ನಾವು ಯಾವ ಕಡೆಗೆ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಕುರಿತಂತೆ ಮಾತನಾಡಿದ ಕಾಂಗ್ರೆಸ್​ನ ಮಾಧ್ಯಮ ವಕ್ತಾರ ಬ್ರಿಜೇಶ್​, ಇಂತಹ ಪ್ರಕರಣಗಳನ್ನು ಸುಮಾರು 10 ವರ್ಷದಿಂದ ನಾವು ನೋಡುತ್ತಲೇ ಬಂದಿದ್ದೇವೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಇಂಥ ಪ್ರಕರಣಗಳಿಗೂ ಹೆಚ್ಚು ಪ್ರಚಾರ ಸಿಗುತ್ತಿವೆ. ಎಲ್ಲಿ ಹೆಚ್ಚು ದುಡ್ಡು ಇರುತ್ತದೆಯೋ, ಅಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತದೆ ಎಂದರು.

ರಾಜ್ಯಕೀಯ ವೈಷಮ್ಯಕ್ಕೂ ಇಂತಹ ಪ್ರಕರಣಗಳು ಬಳಕೆಯಾಗುತ್ತಿವೆಯಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮಾಧ್ಯಮ ವಕ್ತಾರ ಗೋ.ಮಧುಸೂದನ್, ಜನ ನಾಯಕ ಎಂಬ ವ್ಯಕ್ತಿಗೆ ಅಥವಾ ಆತ ಪ್ರತಿಕ್ರಿಯಿಸುವ ಸಮೂಹಕ್ಕೆ ಅಪಮಾನವಾಗುವಂತಹ ಪ್ರಕರಣಗಳಿವು. ರಾಜಕೀಯ ವ್ಯವಸ್ಥೆಯು ಕುಸಿಯುತ್ತಿದೆ. ತನ್ನ ಕಡೆ ಕೆಲಸ ಕೇಳುತ್ತ ಬಂದಂತಹ ಮಹಿಳೆಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವುದು ತಪ್ಪು. ಇಂತಹ ಪ್ರಕರಣಗಳನ್ನು ನೋಡುತ್ತಿರುವುದು ದೇಶದ ದೌರ್ಭಾಗ್ಯವೇ ಸರಿ. ಇಂತಹ ಲಂಪಟತನಗಳು ಖಾಸಗಿ ಜೀವನದಲ್ಲೂ ನಡೆಯುತ್ತಿರುತ್ತವೆ. ಇಂಥ ವಿಷಯಗಳನ್ನು ಮಾಧ್ಯಮಗಳು ಸ್ವೀಕರಿಸುವಷ್ಟೇ ಗಂಭೀರವಾಗಿ ಸಾರ್ವಜನಿಕರೂ ತೆಗೆದುಕೊಳ್ಳುತ್ತಾರೆ ಎನ್ನಲು ಸಾಧ್ಯವಿಲ್ಲ ಎಂದರು.

ಹಿಂದೆ ದ್ರೌಪದಿಯ ವಸ್ತ್ರಾಪಹರಣ ಮಾಡಿದ ದುಶ್ಯಾಸನ ಅಥವಾ ದುರ್ಯೋಧನರ ಇಡೀ ವಂಶವನ್ನೇ ಪಾಂಡವರು ಚೆಂಡಾಡಿದ್ದರು. ಈ ಸಂಗತಿಗಳಲ್ಲಿ ಹೆಣ್ಣುಮಕ್ಕಳನ್ನು ಉಪಯೋಗಿಸಿಕೊಳ್ಳುವುದನ್ನೂ ನಾವು ಕಾಣುತ್ತಿದ್ದೇವೆ. ಇದಕ್ಕೆ ಹನಿಟ್ರಾಪಿಂಗ್ ​(ವಿಷ ಕನ್ನೆಯರು) ಎಂದು ಕರೆಯುತ್ತಾರೆ. ತಮ್ಮ ಶತ್ರುಗಳ ಜೊತೆ ವಿಷ ಕನ್ಯೆಯರನ್ನು ಕಳುಹಿಸಿ ರಾತ್ರೋರಾತ್ರಿ ಶತ್ರುಗಳನ್ನು ಇಲ್ಲದಂತೆ ಮಾಡುವಂತಹ ಬಗ್ಗೆ ಕಥೆಗಳನ್ನು ಕೇಳಿದ್ದೇವೆ. ರಾಜಕಾರಣದಲ್ಲಿ ಕೆಲವು ಹೊಂದಾಣಿಕೆಗಳಿರುತ್ತವೆ. ಯಾರಿಲ್ಲ ಅಂತಾದರೂ ಸರ್ಕಾರ ನಡೆಯುತ್ತದೆ. ಯಾರಿಲ್ಲ ಅಂದರೂ ದೇಶ ಉಳಿಯುತ್ತದೆ. ಸುಮ್ಮನೆ ಸಿಡಿ ಎದುರಿಟ್ಟುಕೊಂಡು ಹೆದರಿಸುವ ಕೃತ್ಯ ಮಾಡುವುದು ಬೇಡ. ಅವರ ಮಾನ ಹರಾಜು ಹಾಕುವುದೂ ಬೇಡ. ಅದರ ಬದಲಾಗಿ ಯಾರ ಯಾರ ಸಿಡಿ ಇದೆಯೋ ಎಲ್ಲವನ್ನೂ ಒಮ್ಮೆಲೆ ಬಿಡುಗಡೆ ಮಾಡಿಬಿಡಲಿ ಎಂದರು. ಪತ್ರಕರ್ತ ಹೃಷಿಕೇಶ್​ ಬಹದ್ದೂರ್ ಮಾತನಾಡಿ, ರಮೇಶ್​ ಜಾರಕಿಹೊಳಿ ಅವರ ಪ್ರಕರಣ ಬೆಂಗಳೂರಿನವರಿಗೆ ಹೊಸದಾಗಿರಬಹುದು, ಬೆಳಗಾವಿ ಅಥವಾ ಗೋಕಾಕ್​ನಲ್ಲಿರುವವರಿಗೆ ಹೊಸದಲ್ಲ. ಮೊದಲಿನಿಂದಲೂ ರಮೇಶ್​ ಜಾರಕಿಹೊಳಿಯವರ ಬಗ್ಗೆ ಅಲ್ಲಿನ ಜನರಿಗೆ ಗೊತ್ತು. ಇವರ ರಾಜಕೀಯ ಬೆಂಬಲದಿಂದ ಮೇಲೆ ಬಂದ ವ್ಯಕ್ತಿಗಳು ಅವರ ಬೆಂಬಲಿಗರು ಎಂದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ಪ್ರಾಮಾಣಿಕ ಬೆಂಬಲಿಗರಲ್ಲ. ಮೊದಲು ರಾಮಪ್ಪ ಲಚ್ಚಪ್ಪ ಜಾರಕಿಹೊಳಿ ಎಂಬ ಹೆಸರಿನಲ್ಲಿ ಚುನಾವಣೆಗೆ ನಿಂತು ಸೋತರು. ನಂತರ ರಮೇಶ್​ ಜಾರಕಿಹೊಳಿ ಎಂಬ ಹೆಸರಿನ ಮೂಲಕ ಚುನಾವಣೆಯಲ್ಲಿ ನಿಂತು ಗೆದ್ದರು. 20-25 ವರ್ಷ ಜಾರಕಿಹೊಳಿಯವರನ್ನು ನೋಡಿದ್ದು, ಅವರ ಸ್ವಭಾವ ಹೇಗಿದೆ ಎಂಬುದರ ಕುರಿತಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ಪಕ್ಷದಲ್ಲಿರುವ ಕಾರಣ ರಮೇಶ್​ ಜಾರಕಿಹೊಳಿ ಹೀಗೆ ಮಾಡುತ್ತಿದ್ದಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಜನತಾಪಾರ್ಟಿ, ಕಾಂಗ್ರೆಸ್​ಗಳಲ್ಲಿಯೂ ರಮೇಶ್ ಹೀಗೆಯೇ ಇದ್ದವರು ಎಂದರು.

ಜನರ ಆಯ್ಕೆಗೂ ಇಂಥ ಪ್ರಕರಣಗಳಿಗೂ ನೇರ ಸಂಪರ್ಕ ಕಲ್ಪಿಸಬಾರದು. ಅಧಿಕಾರಯುತ ಸ್ಥಾನದಲ್ಲಿದ್ದುಕೊಂಡು ತಮ್ಮಲ್ಲಿ ಕೆಲಸ ಕೇಳಿಕೊಂಡು ಬಂದ ಮಹಿಳೆಯನ್ನು ಈ ರೀತಿ ಬಳಸಿಕೊಳ್ಳುವುದು ತಪ್ಪು. ಮತ ಹಾಕುವಾಗ ಜನರು ಇವರ ನಡವಳಿಕೆಗಳನ್ನು ಗಮನದಲ್ಲಿರಿಸಿಕೊಳ್ಳುತ್ತಾರೆ ಎಂದು ಹೇಳಲು ಆಗುವುದಿಲ್ಲ. ಪಕ್ಷವನ್ನು ಮುನ್ನಡೆಸುವವರು ಆಡಳಿತ ನಡೆಸುವವರನ್ನು ಆರಿಸುವಾಗ ಗಮನ ಹರಿಸಬೇಕು. ಹೊಸ ಪಕ್ಷ ಅಥವಾ ಮೌಲ್ಯಾಧಾರಿತ ಪಕ್ಷ ಕಟ್ಟುವಾಗ ಎಚ್ಚರದಿಂದ ಇರಬೇಕು. ಎಲ್ಲಾ ರಾಜಕಾರಿಣಿಗಳೂ ಕೆಟ್ಟವರಲ್ಲ. ಅದೆಷ್ಟೋ ಸಜ್ಜನ ನಾಯಕರಿದ್ದಾರೆ. ಹೊಸ ಥರ ರಾಜಕೀಯ, ರಾಜಕಾರಣ ಮಾಡಬೇಕು ಎಂದವರೂ ಹಳೆಯ ಮಾದರಿಯನ್ನೇ ಅನುಸರಿಸಿದರೆ ಏನು ಸಾಧಿಸಿದಂತಾಯಿತು ಎಂದು ಪ್ರಶ್ನಿಸಿದರು.

ಇದನ್ನೂ ಓದಿTv9 Digital Live | ಜಾರಕಿಹೊಳಿ ಸಿಡಿ: ಮುನ್ನೆಲೆಗೆ ಬಂದ ಕಾನೂನು ಮತ್ತು ನೈತಿಕ ಪ್ರಶ್ನೆಗಳು