ವಿಜಯಪುರದಲ್ಲಿ ಹೆಚ್ಚಾದ ಬಾಲ್ಯ ವಿವಾಹ: ಮೂರು ವರ್ಷದೀಚೆಗೆ 539 ಪ್ರಕರಣ
Child Marriage: ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ನೋಡಿದಾಗ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಗಂಭೀರ ಸ್ವರೂಪ ಕಂಡು ಬರುತ್ತದೆ. ಜಿಲ್ಲೆಯಲ್ಲಿ 2018 -19 ರಲ್ಲಿ 219, 2019-20 ರಲ್ಲಿ 171, 2020ರ ಏಪ್ರಿಲ್ನಿಂದ 2021 ಫೆಬ್ರವರಿವರೆಗೆ 149 ಬಾಲ್ಯ ವಿವಾಹಗಳು ನಡೆದಿವೆ.
ವಿಜಯಪುರ: ಸಾಮಾಜಿಕ ಅನಿಷ್ಟ ಪದ್ಧತಿಗಳಲ್ಲಿ ಬಾಲ್ಯ ವಿವಾಹವೂ ಒಂದು. ಸರ್ಕಾರ ಬಾಲ್ಯ ವಿವಾಹ ಮಾಡುವುದು ಕಾನೂನು ಬಾಹಿರವೆಂದು ಘೋಷಣೆ ಮಾಡಿದ್ದರೂ ಎಲ್ಲೆಡೆ ಬಾಲ್ಯ ವಿವಾಹಕ್ಕೆ ಸಂಪೂರ್ಣವಾಗಿ ತಡೆ ಹಾಕಲು ಆಗುತ್ತಿಲ್ಲಾ. ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ವಿಜಯಪುರದಲ್ಲೂ ಎಗ್ಗಿಲ್ಲದೇ ಬಾಲ್ಯ ವಿವಾಹಗಳು ನಡೆಯುತ್ತವೆ. ಅದರಲ್ಲೂ ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಲೆಕ್ಕಕ್ಕೆ ಸಿಗದಷ್ಟು ಬಾಲ್ಯ ವಿವಾಹಗಳು ನಡೆದಿವೆ.
ಮೂರು ವರ್ಷದ ಅಂಕಿ-ಅಂಶಗಳು ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಇನ್ನೂ ತಡೆ ಬಿದ್ದಿಲ್ಲಾ. ಅದರಲ್ಲೂ ಗುಮ್ಮಟ ನಗರಿಯಲ್ಲಿ ಬಾಲ್ಯ ವಿವಾಹಕ್ಕೆ ತಡೆ ಬೀಳುತ್ತಿಲ್ಲಾ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ನೋಡಿದಾಗ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಗಂಭೀರ ಸ್ವರೂಪ ಕಂಡು ಬರುತ್ತದೆ. ಜಿಲ್ಲೆಯಲ್ಲಿ 2018 -19 ರಲ್ಲಿ 219, 2019-20 ರಲ್ಲಿ 171, 2020ರ ಏಪ್ರಿಲ್ನಿಂದ 2021 ಫೆಬ್ರವರಿವರೆಗೆ 149 ಬಾಲ್ಯ ವಿವಾಹಗಳು ನಡೆದಿವೆ.
2018-19 ರಿಂದ ಇಲ್ಲಿಯವರೆಗೆ ಒಟ್ಟು 539 ಬಾಲ್ಯ ವಿವಾಗಳು ನಡೆದಿವೆ ಎಂದು ತಿಳಿದುಬಂದಿದೆ. ಇನ್ನು ಯಾರ ಗಮನಕ್ಕೂ ಬಾರದೇ ಆಗಿರುವ ಬಾಲ್ಯ ವಿವಾಹಗಳ ಲೆಕ್ಕ ಯಾರಿಗೂ ಸಿಕ್ಕಿಲ್ಲಾ. ಇದರ ಜೊತೆಗೆ ಕೊರೊನಾದಿಂದ ಲಾಕ್ಡೌನ್ಆಗಿದ್ದ ವೇಳೆ ಕದ್ದು ಮುಚ್ಚಿ ಬಾಲ್ಯ ವಿವಾಹಗಳು ಆಗಿವೆ. ಇಷ್ಟೆಲ್ಲಾ ಬಾಲ್ಯ ವಿವಾಹಗಳು ನಡೆದಿದ್ದರೂ ಸರ್ಕಾರ ಏನೂ ಆಗೇ ಇಲ್ಲಾ ಎಂದಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯೂ ಆಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಉಸ್ತುವಾರಿಕೆಯ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳಿಗೆ ತಡೆ ಬೀಳುತ್ತಿಲ್ಲಾ. ಈ ಕುರಿತು ಸ್ವತಃ ಸಚಿವೆ ಜೊಲ್ಲೆ ಅವರ ಗಮನ ಸೆಳೆದಾಗ ಇಡೀ ರಾಜ್ಯದಲ್ಲಿ ಬಾಲ್ಯ ವಿವಾಹ ಆಗಿವೆ. ಲಾಕ್ಡೌನ್ ಸಮಯದಲ್ಲಿ ಹೆಚ್ಚಾಗಿವೆ. 80 ರಿಂದ 85 ರಿಂದ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಇನ್ನುಳಿದ ಪ್ರತಿಶತ 10 ರಿಂದ 15 ರಷ್ಟು ಬಾಲ್ಯ ವಿವಾಹಗಳು ಪರಸ್ಪರ ಪ್ರೀತಿಸಿ ಬೇರೆ ಕಡೆ ಹೋಗಿ ವಿವಾಹ ಆಗಿರುವಂತವು. ವಿಜಯಪುರ ಜಿಲ್ಲೆಯಲ್ಲಿ ನಮ್ಮ ಆಧಿಕಾರಿಗಳು 86 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ. ಉಳಿದ 3 ಪ್ರಕರಣಗಳ ಕುರಿತು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಹಲವು ಕಡೆ ಬಾಲ್ಯ ವಿವಾಹಗಳ ಅಂಕಿ-ಅಂಶಗಳು ಇದೇ ವಿಚಾರವಾಗಿ ಈ ಹಿಂದೆ ವಿಧಾನಪರಿಷತ್ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವೆ ಜೊಲ್ಲೆ ಇಡೀ ರಾಜ್ಯದಲ್ಲಿ 1,918 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ ಎಂದು ಉತ್ತರ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಇಡೀ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ 68, ರಾಮನಗರದಲ್ಲಿ 61, ಶಿವಮೊಗ್ಗ 31, ಬೆಂಗಳೂರು ಗ್ರಾಮಾಂತರ, ಹಾಸನ, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಯಲ್ಲಿ ತಲಾ ಎರಡು ಬಾಲ್ಯ ವಿವಾಹಗಳು ಆಗಿವೆ ಎಂದು ಹೇಳಿದ್ದರು. ಕೋಲಾರ, ಗದಗ, ಹಾವೇರಿ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದೊಂದು ಬಾಲ್ಯ ವಿವಾಹವಾಗಿವೆ ಎಂದು ಹೇಳಿದ್ದರು.
ಸದ್ಯ ವಿಜಯಪುರ ಜಿಲ್ಲಾ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕಿ ಸುನಂದಾ ತೋಲಬಂದಿ ಅವರು ಅಂಕಿ ಅಂಶಗಳ ಪ್ರಕಾರ 539 ಬಾಲ್ಯ ವಿವಾಹಗಳು ನಡೆದಿವೆ ಎಂದಿದ್ದಾರೆ. ಕೊರೊನಾ ಕಾರಣದಿಂದ ಲಾಕ್ಡೌನ್ನಿಂದ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ ಎಂದಿದ್ದಾರೆ. ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕಿಗಾಗಿ ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ 1098 ಮಕ್ಕಳ ಸಹಾಯವಾಣಿಗಾಗಿ ಸೇವೆ ಮಾಡುತ್ತಿದೆ. ಬಾಲ್ಯ ವಿವಾಹ ತಡೆಯವುದು, ಮಕ್ಕಳ ರಕ್ಷಣೆ, ಮಕ್ಕಳ ಹಕ್ಕಿಗಾಗಿ ಸರ್ಕಾರೇತರ ಸಂಸ್ಥೆಯಾಗಿ ಸೇವೆ ಮಾಡುತ್ತಿದೆ.
ಪ್ರಜ್ಞಾವಂತ ನಾಗರಿಕ ಅಸಮಾಧಾನ ಜಿಲ್ಲೆಯಲ್ಲಿ ವ್ಯಾಪಕವಾಗಿ ಬಾಲ್ಯ ವಿವಾಹಗಳು ನಡೆದಿರುವುದಕ್ಕೆ ಪ್ರಜ್ಞಾವಂತ ನಾಗರಿಕರು ಸಹ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿನ ಬಡತನ, ಅನಕ್ಷರತೆ, ಆರ್ಥಿಕವಾಗಿ ಸಂಕಷ್ಟದ ಕಾರಣಗಳಿಂದ ಬಾಲ್ಯ ವಿವಾಹಗಳು ಎಗ್ಗಿಲ್ಲದೇ ನಡೆದಿವೆ. ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಈ ಸಾಮಾಜಿಕ ಪಿಡುಗನ್ನು ಹೊಡೆದೋಡಿಸಲು ಪ್ರಾಮಾಣಿಕ ಕೆಲಸ ಮಾಡಬೇಕು. ಜನರೂ ಸಹ ಜಾಗೃತರಾಗಬೇಕಿದೆ ಎಂದಿದ್ದಾರೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಮಾತ್ರವಲ್ಲದೇ ಈ ಕುರಿತು ತಪ್ಪಿತಸ್ಥರಿಗೆ ಕನಿಷ್ಟ ಮಟ್ಟದ ಶಿಕ್ಷೆಯಾಗಬೇಕು. ಶಿಕ್ಷೆಯ ಭಯದಿಂದಲಾದರೂ ಬಾಲ್ಯ ವಿವಾಹಕ್ಕೆ ತಡೆ ಹಾಕಬಹುದಾಗಿದೆ. ಸರ್ಕಾರ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಸರ್ಕಾರೇತರ ಸಂಸ್ಥೆಗಳ ಮಧ್ಯೆ ಉತ್ತಮ ಸಂಬಂಧ ಹಾಗೂ ಸಂವಹನ ಇರಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಕೊರೊನಾ ಲಾಕ್ಡೌನ್ ವೇಳೆ ಬಾಲ್ಯ ವಿವಾಹ.. ಇಬ್ಬರ ಗರ್ಭಿಣಿ ಮಾಡಿದ ತಪ್ಪಿಗೆ ಪತಿಯರ ವಿರುದ್ಧ ಕೇಸ್