Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್

Viral Video: ವಿಡಿಯೋದಲ್ಲಿ ಹಿಂಸೆಯ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ಮರದ ಹಿಂಬಾಗದಲ್ಲಿ ಕಟ್ಟಿ ಹಾಕಿದ ಆನೆಯ ಆಚೀಚೆಗೆ ನಿಂತ ಮಾವುತರು ದೊಣ್ಣೆಯಿಂದ ಮುಂಗಾಲುಗಳಿಗೆ ಬಡಿದಿದ್ದಾರೆ. ಹೊಡೆತವನ್ನು ತಾಳಲಾರದೇ ಆನೆ ನೋವಿನಿಂದ ಘೀಳಿಡುವ ದೃಶ್ಯ ಮನಕಲಕುವಂತಿದೆ.

Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್
ಆನೆಗೆ ಥಳಿಸುತ್ತಿರುವ ಮಾವುತರು
Follow us
Skanda
| Updated By: ಸಾಧು ಶ್ರೀನಾಥ್​

Updated on:Feb 22, 2021 | 1:07 PM

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಪ್ರದೇಶದ ಆನೆ ಶಿಬಿರದಲ್ಲಿ ಇಬ್ಬರು ಮಾವುತರು ಆನೆಯೊಂದಕ್ಕೆ ಮನಸೋ ಇಚ್ಛೆ ಥಳಿಸಿ ಹಿಂಸೆ ನೀಡಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆ ತಮ್ಮ ಅಣತಿಯಂತೆ ವರ್ತಿಸುತ್ತಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ಮಾವುತರು ಆನೆಯ ಮೇಲೆ ತಮ್ಮ ಸಿಟ್ಟು ತೋರಿಸಿದ್ದು, ಬೇಕಾಬಿಟ್ಟಿ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಮಾವುತರ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದು, ಸದ್ಯ ಅವರಿಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ.

ವಿಡಿಯೋದಲ್ಲಿ ಹಿಂಸೆಯ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ಮರದ ಹಿಂಬಾಗದಲ್ಲಿ ಕಟ್ಟಿ ಹಾಕಿದ ಆನೆಯ ಆಚೀಚೆಗೆ ನಿಂತ ಮಾವುತರು ದೊಣ್ಣೆಯಿಂದ ಮುಂಗಾಲುಗಳಿಗೆ ಬಡಿದಿದ್ದಾರೆ. ಹೊಡೆತವನ್ನು ತಾಳಲಾರದೇ ಆನೆ ನೋವಿನಿಂದ ಘೀಳಿಡುವ ದೃಶ್ಯ ಮನಕಲಕುವಂತಿದ್ದು, ದೈತ್ಯ ಪ್ರಾಣಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ಮನುಷ್ಯ ಮಿತಿಮೀರಿದಂತೆ ವರ್ತಿಸುವುದು ಬೇಸರ ಮೂಡಿಸುತ್ತದೆ.

ಪ್ರತಿವರ್ಷವೂ ಇಲ್ಲಿ ಆನೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿಯ ಶಿಬಿರದಕ್ಕೆ 28 ಆನೆಗಳನ್ನು ತೆಗೆದುಕೊಳ್ಳಲಾಗಿದೆ. ಶ್ರೀವಿಲ್ಲಿಪುತ್ತೂರ್ ದೇಗುಲದ ಆನೆ ಮಾವುತರ ಮಾತನ್ನು ಸರಿಯಾಗಿ ಕೇಳುತ್ತಿಲ್ಲ ಎಂಬ ಕಾರಣಕ್ಕೆ ತರಬೇತಿ ನೀಡಲು ಇಲ್ಲಿಗೆ ತಂದುಬಿಡಲಾಗಿತ್ತು. ಆದರೆ, ತರಬೇತಿಯ ನೆಪದಲ್ಲಿ ಅತಿ ಕ್ರೂರವಾಗಿ ನಡೆದುಕೊಂಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಈ ವಿಡಿಯೋ ವೈರಲ್​ ಆದ ತಕ್ಷಣ ಸಾಕಷ್ಟು ಜನರು ಹಾಗೂ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ಈ ತೆರನಾಗಿ ಹಿಂಸಿಸುವ ಘಟನೆ ವರ್ಷಂಪ್ರತಿ ಮರುಕಳಿಸುತ್ತಲೇ ಇದ್ದು, ಇದಕ್ಕೊಂದು ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ. ಜನರ ಆಕ್ರೋಶದ ನಂತರ ಮಾವುತ ವಿನಿಲ್ ಕುಮಾರ್ ಹಾಗೂ ಆತನ ಸಹಾಯಕ ಶಿವಪ್ರಸಾದ್ ಇಬ್ಬರನ್ನೂ ವಜಾಗೊಳಿಸಿ ವನ್ಯಜೀವಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆಲದಿನಗಳ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಆನೆಯನ್ನು ಹೆದರಿಸಲು ರೆಸಾರ್ಟ್​ ಮಾಲೀಕ ಬೆಂಕಿ ಹಚ್ಚಿ ಅದರ ಮೇಲೆ ಎಸೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಆನೆ ನೋವು ತಾಳಲಾರದೇ ಸಾವನಪ್ಪಿದ ಘಟನೆ ಎಲ್ಲರ ಮನಕಲುಕಿತ್ತು. ಇದೀಗ ಆ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ.

ಇದನ್ನೂ ಓದಿ: ಹಾಸನ ಕಾಡಾನೆ ದಾಳಿ: ಚಿಕಿತ್ಸೆ ಫಲಿಸದೆ ಕಾರ್ಮಿಕ ಬಲಿ

ಕಾಫಿ ತೋಟದ ರಸ್ತೆಯಲ್ಲಿ ಧುತ್ತನೆ ಎದುರಾದ ಕಾಡಾನೆ; ಬೈಕ್ ಸವಾರ ಬಚಾವ್!

Published On - 1:07 pm, Mon, 22 February 21