ಪೊಲೀಸ್ ಕಾರಿನಲ್ಲಿ ಸಿಟಿ ರವಿ
ಬೆಳಗಾವಿ, ಡಿಸೆಂಬರ್ 20: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿ ಬಂಧನವಾಗಿದ್ದು, ಬೆಂಗಳೂರಿಗೆ ಕರೆ ತರಬೇಕಿದೆ. ಆದರೆ, ಬೆಳಗಾವಿಯಲ್ಲಿ ಗುರುವಾರ ತಡರಾತ್ರಿ ವರೆಗೂ ಹೈಡ್ರಾಮವೇ ನಡೆದಿದೆ. ಪರಿಣಾಮವಾಗಿ ರಾತ್ರಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಸಿಟಿ ರವಿ ಅವರನ್ನು ಪೊಲೀಸರು ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ.
ಏತನ್ಮಧ್ಯೆ, ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಮಾನವೀಯತೆ ಮರೆತು ಕಾರಿನಲ್ಲೇ ಕರೆದುಕೊಂಡು ಸುತ್ತಾಟ ಮಾಡಿರುವ ಆರೋಪವೂ ಪೊಲೀಸರ ವಿರುದ್ಧ ಕೇಳಿಬಂದಿದೆ.
ರಾತ್ರಿ ಏನೇನಾಯ್ತು?
- ಸಿಟಿ ರವಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಪೊಲೀಸರು ಬೆಳಗಾವಿ ಜಿಲ್ಲೆಯ ನಿರ್ಜನ ಪ್ರದೇಶ ಸೇರಿ ಜಮೀನು, ತೋಟ ಎಲ್ಲ ಕಡೆ ಸುತ್ತಾಡಿಸಿದ್ದಾರೆ.
- ರಾತ್ರಿ 12.05ಕ್ಕೆ ಖಾನಾಪುರ ಪೊಲೀಸ್ ಠಾಣೆಯಿಂದ ಸ್ಥಳಾಂತರ.
- ರಾತ್ರಿ 12.45ಕ್ಕೆ ಕಿತ್ತೂರಿಗೆ ಆಗಮನ, ಇಲ್ಲಿ ಸುಮಾರು ಅರ್ಧ ಗಂಟೆ ಕಾಲ ಕಾರು ನಿಲ್ಲಿಸಿ ಕಾಲಹರಣ.
- ರಾತ್ರಿ 1.30ಕ್ಕೆ ಕಿತ್ತೂರಿನಿಂದ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಮಾರ್ಗವಾಗಿ ಮತ್ತೆ ಬೆಳಗಾವಿ ಜಿಲ್ಲೆಯ ಬೆಳವಡಿ ಗ್ರಾಮಕ್ಕೆ ತಲುಪಿದ್ದಾರೆ.
- ರಾತ್ರಿ 1.45ಕ್ಕೆ ಸವದತ್ತಿ ಪಟ್ಟಣಕ್ಕೆ ತಲುಪಿ 15 ನಿಮಿಷ ಕಾಲಹರಣ ಮಾಡಲಾಗಿದೆ.
- ತಡರಾತ್ರಿ 2.45 ಕ್ಕೆ ರಾಮದುರ್ಗದ ಡಿವೈಎಸ್‌ಪಿ ಕಚೇರಿಗೆ ಆಗಮನ.
- ರಾಮದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ಸಿಟಿ ರವಿ ತಲೆ ಗಾಯಕ್ಕೆ ಬ್ಯಾಂಡೇಜ್ ಹಾಕಿಸಿದ ಪೊಲೀಸರು.
- ತಡರಾತ್ರಿ 2.55ಕ್ಕೆ ಸಿಟಿ ರವಿಗೆ ಬ್ಯಾಂಡೇಜ್ ಹಾಕಿದ ನರ್ಸ್.
- ನಸುಕಿನ 3.25ಕ್ಕೆ ರಾಮದುರ್ಗ ಡಿವೈಎಸ್‌ಪಿ ಕಚೇರಿಯಿಂದ ಹೊರ ಕರೆದುಕೊಂಡು ಬಂದ ಪೊಲೀಸರು.
- ಅಲ್ಲಿಂದ ಎರಡು ಬಾರಿ ರಾಮದುರ್ಗ ಪಟ್ಟಣದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಟ.
- ಇದರಿಂದ ಆಕ್ರೋಶಗೊಂಡು ರಸ್ತೆಯಲ್ಲಿ ಧರಣಿ ಕುಳಿತು ಶೂಟ್ ಮಾಡಿ ಎಂದು ಪೊಲೀಸರ ವಿರುದ್ಧ ಸಿಟಿ ರವಿ ಆಕ್ರೋಶ.
- ರವಿ ಅವರನ್ನು ಕಾರಿಗೆ ಹತ್ತಿಸಿ ಮತ್ತೆ ಬಾಗಲಕೋಟೆ ಕಡೆಗೆ ಪ್ರಯಾಣ.
- ನಸುಕಿನ ಜಾವ 4 ಗಂಟೆಗೆ ಲೋಕಾಪುರ ಬಳಿ ಸಿಟಿ ರವಿ ವಾಹನ ನಿಲ್ಲಿಸಿದ್ದಾರೆ.
- 4.30ಕ್ಕೆ ಯಾದವಾಡ ಬಳಿ ಸೇತುವೆ ಮೇಲೆ ಸಿಟಿ ರವಿ ಕಾರು ನಿಲ್ಲಿಸಿ ಪೊಲೀಸರ ಮಾತುಕತೆ.
- ಮೂರು ಕಡೆಗಳಲ್ಲಿ ಮಾಧ್ಯಮವರಿಗೆ ತಡೆ.
- ಬೆಳಗ್ಗೆ 4.50 ಗಂಟೆಗೆ ಹುಲಕುಂದ ಗ್ರಾಮದ ಬಳಿ ಸಿಟಿ ರವಿಗೆ ತಡೆ. ತಡೆದು ಮತ್ತೆ ಮಾತುಕತೆ ನಡೆಸಿ ಹದಿನೈದು ಸಮಯ ಕಾಲಹರಣ.
- ಬೆಳಗ್ಗೆ 6 ಗಂಟೆಗೆ ಬಟಕುರ್ಕಿ ಕಡೆ ಮತ್ತೆ ಸಿಟಿ ರವಿ ಕಾರು ನಿಲ್ಲಿಸಿ ಕಾಲಹರಣ.
- ಬೆಳಗ್ಗೆ 6.40 ಕ್ಕೆ ಯರಗಟ್ಟಿ ಪಟ್ಟಣಕ್ಕೆ ಎಂಟ್ರಿ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು.
ಇದನ್ನೂ ಓದಿ: ರಕ್ತ ಬರುವಂತೆ ಹಲ್ಲೆ, ಕೊಲೆಗೆ ಸಂಚು: ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಪ್ರತಿ ದೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ