ಬೆಂಗಳೂರು, ಜ.8: ಶ್ರೀಲಂಕಾದಿಂದ ತಮಿಳುನಾಡಿನ ಉತ್ತರ ಕರಾವಳಿಗೆ ಸುಳಿಗಾಳಿ ಬೀಸಿರುವುದರಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆಯ ರಾಜ್ಯ ಕರ್ನಾಟಕದ (Karnataka Rain) ಮೇಲೂ ಇದರ ಪರಿಣಾಮ ಬೀರಿದೆ. ಇಂದು ರಾಜ್ಯಾದ ಕೆಲವೆಡೆ ಮಳೆಯಾಗಿದ್ದು, ನಾಳೆ ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ (Bengaluru Rain) ಮಳೆಯಾಗಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ಮಂಡ್ಯ ಜಿಲ್ಲೆಯಲ್ಲಿ ಇಂದು ಸಾಧಾರಣ ಮಳೆಯಾಗಿದ್ದು, ನಾಳೆಯೂ ಇದು ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು ನಗರದ ಸುತ್ತಮುತ್ತ ಮೋಡ ಕವಿದ ವಾತಾವರಣ ಇದ್ದು, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಹುಚ್ಚು ಮಳೆ, ಮನೆಯ ಗೋಡೆ ಕುಸಿದು 9 ವರ್ಷದ ಬಾಲಕಿ ಸಾವು, ಶಾಲೆಗಳಿಗೆ ರಜೆ
ಈ ಬಾರೀ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದ್ದು, 6.3 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಕಳೆದ ಬಾರಿ 6 ಮಿ.ಮೀ ಮಳೆಯಯಾಗಿತ್ತು. ಅರೆಬಿಕ್ ಸಮುದ್ರದಲ್ಲಿ ಸುಳಿಗಾಳಿ ಬೀಸಿದ ಪರಿಣಾಮ ಇಂದು ಮತ್ತೆ ನಾಳೆ ಹಗುರ ಮಳೆಯಾಗಲಿದೆ. ಈ ತಿಂಗಳು ವಾಡಿಕೆಗಿಂತ ಶೇಕಡ 70ರಷ್ಟು ಹೆಚ್ಚು ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ 7.3 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಸಾದ್ ಹೇಳಿದ್ದಾರೆ.
ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮೋಡ ಕವಿದ ವಾತವರಣವಿದೆ. ಶೀತಗಾಳಿ ಜೋತೆ ಆಗಾಗ ತುಂತುರು ಮಳೆಯಾಗುತ್ತಿದ್ದು, 6 ಗಂಟೆಗೆ ಆನ್ ಅಗುತ್ತಿದ್ದ ಹೆದ್ದಾರಿ ಲೈಟ್ 4 ಗಂಟೆಯಿಂದಲೇ ಆನ್ ಆಗಿವೆ. ಮೋಡ ಕವಿದ ಹಿನ್ನೆಲೆ ಲೈಟ್ ಆನ್ ಮಾಡಿಕೊಂಡು ವಾಹನಗಳು ಸಂಚರಿಸುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಸಾಧ್ಯತೆ ಹಿನ್ನೆಲೆ ನೆಲಮಂಗಲ ಸಂಚಾರಿ ಪೊಲೀಸರು ಅಲರ್ಟ್ ಆಗಿದ್ದಾರೆ.
ವರದಿ: ಶಾಂತಮೂರ್ತಿ ಮತ್ತು ಬಿ ಮೂರ್ತಿ, ಟಿವಿ9
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ