ಕೋಲ್ಕತ್ತಾ: ತೌತೆ ಚಂಡಮಾರುತ ಕಾಟ ತಪ್ಪಿತು ಅನ್ನೋಕೆ ಮುಂಚೆಯೇ ಮುಂಗಾರು ಆರ್ಭಟಕ್ಕೂ ಮುಂಚೆಯೇ ಮತ್ತೊಂದು ಚಂಡಮಾರುತ ಆರ್ಭಟಿಸಲಾರಂಭಿಸಿದೆ. ಯಾಸ್ (Cyclone Yaas) ಹೆಸರಿನ ಈ ಚಂಡಮಾರುತ ಅದಾಗಲೇ ದೇಶದ ಪೂರ್ವ ಕರಾವಳಿಯಲ್ಲಿ ತೊಟ್ಟಿಕ್ಕುತ್ತಿದೆ. ಭಾರತೀಯ ಹವಾಮಾನ ಇಲಾಖೆ (India Meteorological Department -IMD) ಮೂಲಗಳ ಪ್ರಕಾರ ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಭಾಗದಲ್ಲಿ ಮತ್ತು ಪಕ್ಕದ ಅಂಡಮಾನ್ ಉತ್ತರದ ಸಮುದ್ರ ಪ್ರದೇಶದಲ್ಲಿ ಅಲ್ಪ ಒತ್ತಡದ ವಾತಾವರಣ ಸೃಷ್ಟಿಯಾಗಿದೆ. ಅದು ದೇಶದ ವಾಯವ್ಯ ಭಾಗದಲ್ಲಿ ಸಾಗಿ ಸೋಮವಾರದ ವೇಳೆಗೆ (May 24) ಚಂಡಮಾರುತವಾಗಿ ಕಾಣಿಸಿಕೊಳ್ಳಲಿದೆ. ವಾಯವ್ಯ ಭಾಗದತ್ತ ನುಗ್ಗುತ್ತಾ ಮತ್ತಷ್ಟು ತೀವ್ರಗೊಳ್ಳಲಿದ್ದು, ಒಡಿಶಾ ಬಳಿ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಬುಧವಾರದ ವೇಳೆಗೆ (May 26) ಪೂರ್ಣ ಪ್ರಮಾಣದಲ್ಲಿ ಯಾಸ್ ಚಂಡಮಾರುತ ರುದ್ರನರ್ತನ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯ ಆಗ್ನೇಯ ಮತ್ತು ಉತ್ತರ ಭಾಗದಲ್ಲಿ ಯಾಸ್ ಚಂಡಮಾರುತ ಕೇಂದ್ರೀಕೃತವಾಗಲಿದೆ. ಬಂಗಾಳಕೊಲ್ಲಿಯ ಪೂರ್ವ ಕೇಂದ್ರ ಮತ್ತು ಅಂಡಮಾನ್ ಉತ್ತರದ ಸಮುದ್ರ ಪ್ರದೇಶದಲ್ಲಿ ಇಂದು (ಮೇ 22ರಂದು) ಅಲ್ಪ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ. ಅದು ವಾಯವ್ಯ ಭಾಗದತ್ತ ಚಲಿಸಿ, ಸೋಮವಾರದ ವೇಳೆಗೆ (May 24) ಚಂಡಮಾರುತವಾಗಿ ಅಪ್ಪಳಿಸಲಿದೆ. ಒಡಿಶಾದಲ್ಲಿ ಯಾಸ್ ಚಂಡಮಾರುತ ಅದಾಗಲೇ ಚೆಂಡಾಡುತ್ತಿದೆ.
ಅಲ್ಲೆಲ್ಲೋ ಚಂಡಮಾರುತದ ಅಲೆಗಳು ಎದ್ದರೆ ಇಲ್ಲಿ ಕರ್ನಾಟಕದಲ್ಲಿ ಏನು? ಈ ಪ್ರಶ್ನೆಗೆ ಉತ್ತರವಾಗಿ ಇಂದಿನಿಂದ ಮೇ 25ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆ ಆಗಲಿದೆ. ಬೆಂಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬಹುತೇಕ ಕರಾವಳಿಯ ಎಲ್ಲಾ ಭಾಗದಲ್ಲೂ ಮಳೆ ಆಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಈಗಾಗಲೇ ಮಳೆ ಆಗಿದೆ. ಕೋಲಾರದಲ್ಲಿ 10 ಸೆಂ.ಮೀ ಮಳೆ ಆಗಿದೆ. ಭಟ್ಕಳ 3 ಸೆಂ.ಮೀ, ಸುಳ್ಯ 3 ಸೆಂ.ಮೀ, ಆನೆಕಲ್ಲು 3 ಸೆಂ.ಮೀ ಮಳೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಹಿಂದೆ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಹೊತ್ತಿನಲ್ಲಿ ಮಳೆ ಸುರಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯವ್ಯಾಪಿ ಲೆಕ್ಕಾಚಾರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆಯಾದರೂ ಮಲೆನಾಡು, ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಹಾಗೂ ತಂಪು ಹವೆಯ ಪರಿಣಾಮ ಮಳೆಗಾಲದ ವಾತಾವರಣದಂತೆಯೇ ಪರಿಸರ ಕಾಣಿಸುತ್ತಿದೆ.
Karnataka Weather: ಕರ್ನಾಟಕದಲ್ಲಿ ಇಂದು ಮೋಡ ಕವಿದ ವಾತಾವರಣ, ಬೆಳಗ್ಗೆಯಿಂದಲೇ ಕೆಲವೆಡೆ ಮಳೆ ಸಾಧ್ಯತೆ
(Cyclone Yaas sets in Low pressure area likely to form today over Bay of Bengal and Andaman Sea intensify further on 26th May)
Published On - 10:37 am, Sat, 22 May 21