ಬೆಂಗಳೂರು: ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರವೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಕಳೆದ ಒಂದು ತಿಂಗಳಲ್ಲೇ ಎರಡನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಆಂತರಿಕ ಸಮಾಸ್ಯೆಗಳಲ್ಲೇ ಮುಳುಗಿರುವ ಈ ಸರಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯಾವುದೇ ಕ್ರಮವಾಗಿಲ್ಲ. ಕ್ರಮ ಕೈಗೊಂಡಿದ್ದರೆ ಇಂತಹ ದುರಂತ ಮರುಕಳಿಸುತ್ತಿರಲಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಎನ್ನುವ ಮಾತು ಬರಿ ಹಾಸ್ಯಾಸ್ಪದವಾಗಿದೆ. ಹೇಳಿಕೆ ನೀಡುವ ಸರ್ಕಾರದ ಪ್ರತಿನಿಧಿಗಳು ಜೋಕರ್ಗಳಂತೆ ಕಾಣುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರ ಇನ್ನಾದರೂ ನಿಜವಾಗಿ ಎಚ್ಚೆತ್ತುಕೊಂಡು, ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿಯ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಚಿವ ಡಾ. ಸುಧಾಕರ್ ನೇರ ಹೊಣೆ ಎಂದು ಆರೋಪಿಸಿದೆ.
ಶಿವಮೊಗ್ಗದ ಸ್ಫೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ ಅಕ್ರಮ ಕಲ್ಲು ಕ್ವಾರಿಗಳಿಗೆ ಹಾಗೂ ಸ್ಫೋಟಕಗಳಿಗೆ ಕಡಿವಾಣ ಹಾಕದೆ, ಬೆಂಬಲ ನೀಡಿದ್ದರ ಪರಿಣಾಮ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಸಂಭವಿಸಿದೆ. ಶಿವಮೊಗ್ಗದಂತೆ ಇಲ್ಲೂ ಕೂಡ ಅಕ್ರಮದ ಹಿಂದೆ ಬಿಜೆಪಿಗರೇ ಇದ್ದಾರೆ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಆರೋಪ ಮಾಡಿದೆ.
ಇದನ್ನೂ ಓದಿ: Chikkaballapura Gelatin Blast | ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆ