ಬೆಂಗಳೂರು: ತೇರದಾಳದಲ್ಲಿ ಪುರಸಭೆ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನ ವಹಿಸಿರುವುದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಲ್ಲ, ಯಾರನ್ನೂ ಬಂಧಿಸಿಲ್ಲ
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿ, ಭ್ರೂಣ ಹತ್ಯೆ ಎಂದರೆ ಕೊಲೆಗೆ ಸಮ. ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಿರುವುದು ಅಪರಾಧ ಎಂದಿದ್ದಾರೆ. ಮಹಾಭಾರತದಲ್ಲಿ ದುಶ್ಶಾಸನನ ದೌರ್ಜನ್ಯ ಕಣ್ಣೆದುರು ಕಂಡಂತೆ ಈ ಪ್ರಕರಣವನ್ನು ಮಾಧ್ಯಮಗಳು ತೋರಿಸಿವೆ. ಆದರೆ, ಈವರೆಗೂ ಪೊಲೀಸರು ಪ್ರಕರಣ ದಾಖಲಿಸಿ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ, ಮಹಿಳಾ ಸಚಿವರು, ಶೋಭಾ ಕರಂದ್ಲಾಜೆ, ದೇಶದಲ್ಲಿರುವ ಮಹಿಳಾ ಸಂಘಟನೆಗಳು ಯಾರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಬಿಜೆಪಿಯವರು ದೌರ್ಜನ್ಯ ಎಸಗಿದ ತಮ್ಮ ಶಾಸಕನ ರಕ್ಷಣೆಗಾಗಿ ನಿಂತಿರುವುದು ನಾಚಿಕೆಗೇಡಿನ ವಿಚಾರ ಎಂದಿದ್ದಾರೆ. ಇದು ಕೇವಲ ದೇಶ ಮಟ್ಟದ ವಿಷಯವಲ್ಲ, ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ?
ಇದೇ ಪರಿಸ್ಥಿತಿ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬಂದಿದ್ದರೆ? ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪ್ರಶ್ನಿಸಿದ ಡಿಕೆಶಿ, ಶೋಭಾ ಕರಂದ್ಲಾಜೆ ಹಾಗೂ ಶಶಿಕಲಾ ಜೊಲ್ಲೆಗೆ, ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಕೇಳಿದ್ದಾರೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ಯಾವ ರೀತಿಯ ರಕ್ಷಣೆ, ಗೌರವ ಸಿಗುತ್ತದೆ ಎಂಬುದು ಗೊತ್ತಾಗುತ್ತಿದೆ ಎಂದು ಛೇಡಿಸಿದ್ದಾರೆ.
ಸಂತ್ರಸ್ತರ ಪರ ನಿಲ್ಲುತ್ತೇವೆ ಎಂದ ಡಿಕೆಶಿ
ಈ ವಿಚಾರವಾಗಿ ನಾನು, ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಮಹಿಳಾ ಶಾಸಕರು ಇಂದು ತೇರದಾಳಕ್ಕೆ ಹೋಗಿ ಸಂತ್ರಸ್ತರ ಪರ ನಿಲ್ಲಲು ನಿರ್ಧರಿಸಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತ
Published On - 5:26 pm, Sat, 5 December 20