
ಬೆಂಗಳೂರು, ಆಗಸ್ಟ್ 19: ಧರ್ಮಸ್ಥಳದ (Dharmasthala) ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ (Sasikanth Senthil) ಅವರ ಕೈವಾಡವಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಂಸದ ಸಸಿಕಾಂತ್ ಸೆಂಥಿಲ್ ಮೂಲಕ ಈ ಕೇಸ್ ಮಾಡಿಸುತ್ತಿದ್ದಾರೆ ಎಂದರು.
ಮುಸುಕುಧಾರಿಯೂ ಕೂಡ ತಮಿಳುನಾಡು ಮೂಲದವನು. ಮುಸುಕುಧಾರಿ ಇಷ್ಟು ವರ್ಷ ತಮಿಳುನಾಡಿನಲ್ಲಿಯೇ ವಾಸಿಸುತ್ತಿದ್ದನು. ತಮಿಳುನಾಡಿನ ಆ ವ್ಯಕ್ತಿಗೂ, ಸಸಿಕಾಂತ್ ಸೆಂಥಿಲ್ಗೂ ನಂಟಿದೆ. ಧರ್ಮಸ್ಥಳ ಕೇಸ್ ಸಂಬಂಧ ಎಸ್ಐಟಿ ತನಿಖೆಯಿಂದ ಸತ್ಯ ಹೊರಬರಲ್ಲ. ರಾಜ್ಯ ಸರ್ಕಾರದ ಸಂಸ್ಥೆಗಳಿಂದ ಸತ್ಯ ಹೊರಬರುವುದಿಲ್ಲ. ಸಿಬಿಐ ಹಾಗೂ ಎನ್ಐಎಯಿಂದ ತನಿಖೆ ಆಗಬೇಕು. ನ್ಯಾಯಕ್ಕಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಅಡಿ ದೂರು ಕೊಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್ಗೆ ಬಿಗ್ ಟ್ವಿಸ್ಟ್: ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ, ಸಸಿಕಾಂತ್ ಸೆಂಥಿಲ್ ಆಪ್ತ ಎಂದ ಜನಾರ್ದನ ರೆಡ್ಡಿ
ಧರ್ಮಸ್ಥಳದ ಬಗ್ಗೆ ದುಷ್ಟ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರವಾಗುತ್ತಿದೆ. ಎಡಪಂಥೀಯ ಮನೋಭಾವನೆವುಳ್ಳ ದುಷ್ಟ ಶಕ್ತಿಗಳೆಲ್ಲ ಸೇರಿಕೊಂಡಿವೆ. ಈ ಹುನ್ನಾರ ಇಲ್ಲಿಗೆ ಕೊನೆಗಾಣಿಸಬೇಕು. ಮುಸುಕುಧಾರಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿಟ್ಟಿದ್ದ ಎಂಬುವುದು ಬೋಗಸ್ ಆಯ್ತು. ಹಿಂದೂ ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ. ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ಗೆ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಎಫ್ಎಸ್ಎಲ್ ವರದಿ ಬಂದ ನಂತರ ಮತ್ತೆ ಮೂಳೆಗಾಗಿ ಶೋಧ ಸಾಧ್ಯತೆ
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ದೊಡ್ಡ ಷಡ್ಯಂತ್ರ ಇದೆ ಅಂತಾ ಹೇಳಿದ್ದಾರೆ. ಆ ಷಡ್ಯಂತ್ರವನ್ನ ಬಹಿರಂಗವಾಗಿ ನಾನು ತಿಳಿಸಿದ್ದೇನೆ. ಹುನ್ನಾರಕ್ಕೆ ಪ್ಲ್ಯಾನ್ ಮಾಡಿದ್ದವರನ್ನು ತಕ್ಷಣ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
ಯೂಟ್ಯೂಬರ್ ಅಪಪ್ರಚಾರ ಮಾಡಿದರು. ಅವರಿಗೆ ಎಲ್ಲಿಂದ ಮಾಹಿತಿ ಬಂತು?ಮುಸುಕುಧಾರಿ
ಎಲ್ಲಿಂದ ಬಂದ? ಬುರುಡೆಗಳೆಲ್ಲ ಸುಳ್ಳು. ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದ್ದೇ ಇದೆ. ಇದು ಚಾಲೆಂಜ್, ಯಾವುದೇ ಅನುಮಾನ ಬೇಡ. ಸಿಬಿಐ, ಎನ್ಐಎ ತನಿಖೆ ಆದ್ರೆ ಮಾತ್ರ ಸತ್ಯ ಹೊರ ಬರುತ್ತದೆ. ಎಸ್ಐಟಿ ಆದ್ರೆ ಮತ್ತೆ ದಾರಿ ತಪ್ಪುತ್ತದೆ. ಸಿಬಿಐ ಮೇಲೆ ನಂಬಿಕೆ ಇಲ್ಲ ಅಂದ್ರೆ ಎನ್ಐಎಗೆ ಕೊಡಿ. ಸರ್ಕಾರ ಸೂಕ್ತ ತನಿಖೆಗೆ ಮುಂದಾಗದಿದ್ದರೇ ನಾನು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಕೋರ್ಟ್ ಮೂಲಕವೇ ತನಿಖೆಗೆ ನಾನು ಮುಂದಾಗುತ್ತೇನೆ. ಪುಣ್ಯಕ್ಷೇತ್ರಕ್ಕೆ ಬಂದಿರುವ ಕಳಂಕ ಹೋಗಬೇಕು ಎಂದರು.
Published On - 1:53 pm, Tue, 19 August 25