ಅದಾನಿ ಒಡೆತನದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ 100ರೂ ಶುಲ್ಕ ಹೆಚ್ಚಳಕ್ಕೆ ಮನವಿ

| Updated By: ಆಯೇಷಾ ಬಾನು

Updated on: Aug 20, 2022 | 2:17 PM

ಎಇಆರ್‌ಎ ಒಪ್ಪಿದಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆ ಈ ಯುಡಿಎಫ್‌ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ 150 ರೂ. ಯುಡಿಎಫ್‌ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಶುಲ್ಕವಿದೆ.

ಅದಾನಿ ಒಡೆತನದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ 100ರೂ ಶುಲ್ಕ ಹೆಚ್ಚಳಕ್ಕೆ ಮನವಿ
ಮಂಗಳೂರು ವಿಮಾನ ನಿಲ್ದಾಣ
Follow us on

ಮಂಗಳೂರು: ಅದಾನಿ ಏರ್‌ಪೋರ್ಟ್ಸ್ ಒಡೆತನದ ಮಂಗಳೂರು ವಿಮಾನ ನಿಲ್ದಾಣವು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ದೇಶೀಯ ಪ್ರಯಾಣಿಕರ ಮೇಲಿನ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು (ಯುಡಿಎಫ್) ತಕ್ಷಣವೇ 100 ರೂ ಹೆಚ್ಚಿಸುವಂತೆ ಕೋರಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೊರಡುವ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ಅನುಮತಿ ಕೋರಿದೆ.

ವಿಮಾನನಿಲ್ದಾಣವು ತನ್ನ ಇತ್ತೀಚಿನ ಸುಂಕದ ವಿವರಗಳ ಸಲ್ಲಿಕೆಯಲ್ಲಿ, ಈ ಅಕ್ಟೋಬರ್‌ನಿಂದ ದೇಶೀಯ ಪ್ರಯಾಣಿಕರ ಮೇಲೆ ರೂ 250ರಷ್ಟು ಯುಡಿಎಫ್ ವಿಧಿಸಲು ಅನುಮತಿ ಕೇಳಿದೆ. ಮತ್ತು ಮಾರ್ಚ್ 31, 2026 ರ ವೇಳೆಗೆ ಅದನ್ನು ರೂ 725 ಕ್ಕೆ ಹೆಚ್ಚಿಸಲು ಕೋರಿದೆ.

ಸುಂಕ ನಿರ್ಧರಿಸುವ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಮಂಗಳೂರು ವಿಮಾನ ನಿಲ್ದಾಣಕ್ಕೆ ಏಪ್ರಿಲ್ 1, 2021ರಿಂದ ಮಾರ್ಚ್ 31, 2026ರ ಅವಧಿಗೆ ಸುಂಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ. ಈ ವೇಳೆ ಅದಾನಿ ಈ ಬೇಡಿಕೆ ಇಟ್ಟಿದ್ದಾರೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 525 ರೂ. ಶುಲ್ಕ ವಿಧಿಸಿ ಮಾರ್ಚ್ 2026ರ ವೇಳೆಗೆ ಇದನ್ನು 1,200 ರೂ.ಗೆ ಹೆಚ್ಚಿಸಲು ಅದಾನಿ ಏರ್‌ಪೋರ್ಟ್ಸ್‌ ಪ್ರಯತ್ನಿಸುತ್ತಿದೆ.

ಎಇಆರ್‌ಎ ಒಪ್ಪಿದಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆ ಈ ಯುಡಿಎಫ್‌ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ 150 ರೂ. ಯುಡಿಎಫ್‌ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಶುಲ್ಕವಿದೆ. ಆದರೆ ಸದ್ಯಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರಿಗೆ ಮಾತ್ರ ಶುಲ್ಕವಿದೆ. ಆಗಮಿಸುವ ಪ್ರಯಾಣಿಕರಿಗೆ ಈ ಶುಲ್ಕ ಇಲ್ಲ. ಅದಾನಿ ಗ್ರೂಪ್ ಅಕ್ಟೋಬರ್ 31, 2020 ರಂದು ಕರ್ನಾಟಕದ ಬಂದರು ನಗರ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ವಹಿಸಿಕೊಂಡಿತ್ತು.

ಬೆಲೆ ನಿಯಂತ್ರಕ ಸಂಸ್ಥೆಗೆ ಸಲ್ಲಿಸಿದ ದಾಖಲೆಯಲ್ಲಿ ಅದಾನಿ ಏರ್‌ಪೋರ್ಟ್ಸ್‌, 2010ರಿಂದ ಯಾವುದೇ ಸುಂಕ ಪರಿಷ್ಕರಣೆ ನಡೆದಿಲ್ಲ. “ವಿಮಾನ ನಿಲ್ದಾಣದ ಆಧುನೀಕರಣ ಯೋಜನೆಯು ಸಹ ನಡೆಯುತ್ತಿದೆ,” ಎಂದು ಹೇಳಿದೆ. ರನ್‌ವೇಯ ರಿಕಾರ್ಪೆಟಿಂಗ್ ಮತ್ತು ಹೊಸ ಟರ್ಮಿನಲ್ ಕಟ್ಟಡ ಮತ್ತು ಕಾರ್ಗೋ ಟರ್ಮಿನಲ್‌ನ ನಿರ್ಮಾಣ ಸೇರಿದಂತೆ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 5,200 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪೋಷಕ ಕಂಪನಿ ಅದಾನಿ ಎಂಟರ್‌ಪ್ರೈಸ್‌ನಿಂದ ಸಾಲ ಮತ್ತು ಇಕ್ವಿಟಿ ಮೂಲಕ ಇವುಗಳಿಗೆ ಹಣ ಒದಗಿಸುವುದಾಗಿ ವಿಮಾನ ನಿಲ್ದಾಣ ಹೇಳಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

Published On - 2:15 pm, Sat, 20 August 22