ಮಂಗಳೂರು,ಫೆ.21: ನಾನು ಗೃಹ ಸಚಿವನಾಗಿದ್ದಾಗ ಭಜರಂಗದಳದವರ (Bajrang Dal) ಮೇಲೆಯೇ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೊಂಡ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ವಿರುದ್ದ ಭಜರಂಗದಳ ಕಿಡಿಕಾರಿದೆ. ಅಶೋಕ್ ಹೇಳಿಕೆ ವಿರುದ್ದ ಮಂಗಳೂರು ಭಜರಂಗದಳ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು ಮಂಗಳೂರಿನ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ಗೆ ಭಜರಂಗದಳ ಮಂಗಳೂರು ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
‘ನೀವು ಆರ್ ಅಶೋಕ್ ಅಲ್ಲ..ನಿಮ್ಮ ಹೆಸರನ್ನು ಎ ಅಶೋಕ್ ಅಂತ ಬದಲಾಯಿಸಿ ಬಿಡಿ ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ.. ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಬಳಸಿ, ಎಕ್ಕಡದ ರೀತಿ ಬಳಸಿಕೊಳ್ಳಬೇಡಿ. ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ. ಪ್ರತಿಪಕ್ಷನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ. ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ. ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ. ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ ಎಂದು ಭಜರಂಗದಳ ಮುಖಂಡ ಪುನೀತ್ ಫೇಸ್ಬುಕ್ ಮೂಲಕ ಆರ್.ಅಶೋಕ್ಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಫಲಾನುಭವಿಗಳಿಗೆ ತಲುಪದ ಮಾಸಾಶನ: ಪಿಂಚಣಿ ನೀಡಲೂ ಹಣವಿಲ್ಲದ ಶೋಚನೀಯ ಪರಿಸ್ಥಿತಿಯಲ್ಲಿದೆ ಸರ್ಕಾರ; ಆರ್ ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಿನ್ನೆ ನಡೆದ ಅಧಿವೇಶನದಲ್ಲಿ ಮಂಗಳೂರು ಹಬ್ ದಾಳಿ ಬಗ್ಗೆ ಮಾತನಾಡಿದರು. ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಅವತ್ತು ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ಮಾಡಿದ್ದ ಭಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಈಗಿನ ಗೃಹ ಸಚಿವ ಪರಮೇಶ್ವರ್ಗೆ ಬುದ್ದಿ ಹೇಳೋ ಭರದಲ್ಲಿ ಆರ್.ಅಶೋಕ್ ಮಾತನಾಡಿದ್ದರು. ಸದ್ಯ ಅಶೋಕ್ ಅವರ ಈ ಹೇಳಿಕೆಗೆ ಆಕ್ರೋಶ ಭುಗಿಲೆದ್ದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:54 am, Wed, 21 February 24