AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ; ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ

ಇದುವರೆಗೆ ದಕ್ಷಿಣ ಕನ್ನಡದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಪಶುಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೇರಳದ ಗಡಿಯಲ್ಲಿರುವ ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ.

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ; ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 25, 2023 | 7:11 PM

Share

ಮಂಗಳೂರು, ಆಗಸ್ಟ್ 25: ನೆರೆ ರಾಜ್ಯ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (African swine flu) ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಹರಡದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada District) ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಫ್ರಿಕನ್ ಹಂದಿ ಜ್ವರವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ದೇಶೀಯ ಮತ್ತು ಕಾಡು ಹಂದಿಗಳಿಂದ ಹರಡುತ್ತದೆ. ಈ ಕಾಯಿಲೆಯಿಂದ ಹಂದಿಗಳು ಸಾಯುತ್ತವೆ. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ವ್ಯಾಕ್ಸಿನೇಷನ್ ಲಭ್ಯವಿಲ್ಲ. ಜ್ವರ ದೃಢಪಟ್ಟ ಸ್ಥಳದ ಒಂದು ಕಿ.ಮೀ. ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಹಂದಿಗಳನ್ನು ಕೊಲ್ಲುವುದು ಮಾತ್ರ ಸದ್ಯ ಅನುಸರಿಸುವ ವಿಧಾನವಾಗಿದೆ. ಇದರಿಂದ ಹಂದಿ ಸಾಕಾಣಿಕೆದಾರರಿಗೆ ಭಾರಿ ಆರ್ಥಿಕ ನಷ್ಟವಾಗುತ್ತದೆ.

ಇದುವರೆಗೆ ದಕ್ಷಿಣ ಕನ್ನಡದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಪಶುಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೇರಳದ ಗಡಿಯಲ್ಲಿರುವ ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ದಕ್ಷಿಣ ಕನ್ನಡದಿಂದ ಕೇರಳಕ್ಕೆ ಹಂದಿ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸಲಾಗುತ್ತದೆ. ಕೇರಳಕ್ಕೆ ಹಂದಿ ಮಾಂಸ ಪೂರೈಸಿ ಹಿಂತಿರುಗುತ್ತಿರುವ ವಾಹನಗಳಿಗೆ ರಾಸಾಯನಿಕ ಸಿಂಪಡಿಸಲಾಗುತ್ತದೆ. ಹಂದಿಗಳು ಮತ್ತು ಹಂದಿ ಸಾಗಣೆಯ ಮೇಲೂ ನಿಗಾ ವಹಿಸಲಾಗಿದೆ. ಎಲ್ಲಾ ಪಶುವೈದ್ಯರು ತಮ್ಮ ವ್ಯಾಪ್ತಿಯ ಹಂದಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿ ಹಂದಿ ಸಾಕಣೆದಾರರಿಗೆ ಸೂಕ್ತ ಸಲಹೆ ನೀಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಫ್ರಿಕನ್ ಹಂದಿ ಜ್ವರ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇದು ಮನುಷ್ಯರಿಗೆ ಹರಡುವುದಿಲ್ಲ. ಈ ವಿಷಯದಲ್ಲಿ ಹಲವರಿಗೆ ಗೊಂದಲವಿದೆ. ಸ್ಥಳೀಯವಾಗಿ ಹಂದಿ ಸಾಕಾಣಿಕೆ ಮಾಡುವವರು ಪಶುಸಂಗೋಪನಾ ಇಲಾಖೆ ಸೂಚಿಸಿದ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ

ಮೈಸೂರು ವ್ಯಾಪ್ತಿಯ ಕೇರಳ ಗಡಿಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್​ನಲ್ಲಿ ವಿಶೇಷ ತಂಡ ರಚನೆ ಮಾಡಿ, ತಪಾಸಣೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ