ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಸುಧಾರಣೆ ಆಗಲಿದೆ. ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಹೊಸ ಶಿಕ್ಷಣ ವ್ಯವಸ್ಥೆ ಮೂಲಕ ಸುಧಾರಣೆ ಆಗಲಿದೆ. ಈ ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ಧವಾಗಿ ಏನೂ ಇಲ್ಲ ಎಂದು ಮಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಸುಮ್ಮನೆ ಕೇಸರೀಕರಣ ಎನ್ನುವ ಆರೋಪ ಸರಿಯಲ್ಲ. ಈ ಬಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆಗಳಾಗಲಿವೆ. ಮುಂದಿನ ವರ್ಷಗಳಲ್ಲಿ ಆಡಳಿತಾತ್ಮಕ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ. ಕೊವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ಅಡಚಣೆಗಳಾಗಿವೆ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಆತುರದಲ್ಲಿ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿಲ್ಲ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಮೂಲತತ್ವಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಕಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ. ಅಂತರ್ ಶಿಸ್ತು ಪಾಲನೆಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಇಲ್ಲಾಂದ್ರೆ ನಿಂತ ನೀರಾಗುತ್ತದೆ. ನಮ್ಮ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಎನ್ಇಪಿಯಲ್ಲಿ ಸುಧಾರಣೆಯಾಗಲಿದೆ ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಈ ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ಧವಾಗಿರುವಂತಹದ್ದು ಏನೂ ಇಲ್ಲ ಎಂದು ಮಂಗಳೂರು ವಿವಿಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನ ಕೋಣಾಜೆ ವಿಶ್ವ ವಿದ್ಯಾನಿಲಯದಲ್ಲಿ ನಡೆದಿತ್ತು. ಈ ಸಂಬಂಧ ಅಶ್ವತ್ಥ್ ನಾರಾಯಣ ಮಾತುಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಉದ್ಘಾಟನಾ ಸಮಾರಂಭವನ್ನು ವಿರೋಧಿಸಿ ಮಂಗಳ ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಸಿಎಫ್‌ಐ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಕರ್ತರು ನೂತನ ನೀತಿಯಲ್ಲಿ ಮಧ್ಯ ಯುಗದ ಇತಿಹಾಸ ತೆಗೆದಿದ್ದಾರೆ. ಪ್ರಾಚೀನ ಮತ್ತು ಈಗಿನ ಇತಿಹಾಸವನ್ನು ಕಲಿಸಲಾಗುತ್ತಿದೆ. ಪ್ರಾಚೀನ ಯುಗದ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ. ಆ ಮೌಢ್ಯತೆಯನ್ನು ನಾವು ನಮ್ಮ ಮಕ್ಕಳಿಗೆ ಕಲಿಸಲಾಗುವುದಿಲ್ಲ ಎಂದು ವಾದ ಮಾಡಿದ್ದರು.
ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮೊದಲೇ ಸುಳಿವು ಸಿಕ್ಕಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಲಾಗಿತ್ತು. ಹೀಗಾಗಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಕಾರ್ಯಕರ್ತರನ್ನು ಮನಬಂದಂತೆ ಎಳೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿಸಿದ್ದರು.
ಇದನ್ನೂ ಓದಿ: ನೂತನ ಶಿಕ್ಷಣ ಪದ್ಧತಿಯಲ್ಲಿ ಮೌಢ್ಯತೆ ತುಂಬಿದೆ, ವರ್ಣಾಶ್ರಮ ಮತ್ತೆ ಬರಲಿದೆ; ಮಂಗಳೂರು ವಿವಿ ಬಳಿ ಸಿಎಫ್‌ಐ ಪ್ರತಿಭಟನೆ