ಡಿಕೆ‌ ಶಿವಕುಮಾರ್ ಅವರೇ ಎರಡನೇ ಬಾರಿ ತಿಹಾರ್ ಜೈಲಿಗೆ ಹೋಗಲು ಸಿದ್ಧರಾಗಿ: ನಳಿನ್ ಕುಮಾರ್ ಕಟೀಲ್

ಭ್ರಷ್ಟಾಚಾರ, ಐಟಿ ದಾಳಿ ವೇಳೆ ಪತ್ತೆಯಾದ ಹಣದ ಬಗ್ಗೆ ಹಾಗೂ ಕಮಿಷನ್ ದಂಧೆ ಮುಂದಿಟ್ಟುಕೊಂಡು ಇಂದು ಬಿಜೆಪಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ ನಳಿನ್ ಕುಮಾರ್ ಕಟೀಲ್, ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ಡಿಕೆ ಶಿವಕುಮಾರ್​ಗೆ ಹೇಳಿದ್ದಾರೆ.

ಮಂಗಳೂರು, ಅ.17: ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಮಣಿಸಲು ನೆರವಾಗಿದ್ದ ಕಮಿಷನ್ ದಂಧೆ, ಭ್ರಷ್ಟಾಚಾರದ ಅಸ್ತ್ರ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ದಂಧೆ, ಲಂಚಾವತಾರದ ವಿರುದ್ಧ ಬಿಜೆಪಿ ಮಂಗಳೂರಿನಲ್ಲಿ (Mangaluru) ಪ್ರತಿಭಟನೆ ನಡೆಸಿದ್ದು, ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)​ ಹೇಳಿದ್ದಾರೆ.

ಸರ್ಕಾರದ ಖಜಾನೆಯ ಹಣ ಸಿದ್ದರಾಮಯ್ಯ ಮತ್ತು‌ ಡಿಕೆ ಶಿವಕುಮಾರ್ ಮನೆಗೆ ಹೋಗಿದೆ. ಖಜಾನೆ ಖಾಲಿ‌ ಮಾಡಿದ ಲೂಟಿಕೋರ ಸರ್ಕಾರ ತೊಲಗಬೇಕು. ಡಿಕೆ‌ ಶಿವಕುಮಾರ್ ಅವರೇ ನೀವು ತಿಹಾರ್ ಜೈಲಿಗೆ ಹೋಗಿ ಬಂದಿದ್ದೀರಿ. ಇದೀಗ ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ಕಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಲಂಚಾವತಾರ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಿನ್ನೆ ಸಿಕ್ಕ ಹಣ ಡಿಕೆ ಶಿವಕುಮಾರ್ ಅವರದ್ದು ಅಂತ ಪತ್ರಿಕೆಗಳು, ಟಿವಿಗಳು ಹೇಳುತ್ತಿವೆ. ಪಂಚರಾಜ್ಯ ಚುನಾವಣೆಗೆ ಎಟಿಎಂ ಕರ್ನಾಟಕ ಆಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್​ಗೆ ಹಣ ಕರ್ನಾಟಕದಿಂದ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು: ಎಟಿಎಂ ಆರೋಪಕ್ಕೆ ಕಾಂಗ್ರೆಸ್ ಟಕ್ಕರ್

ಹೊಟೇಲ್​ಗಳಲ್ಲಿ ತಿಂಡಿಗೆ ಬೆಲೆ ಇದ್ದಂತೆ ಸರ್ಕಾರಿ ಕಚೇರಿಗಳಲ್ಲಿ ರೇಟ್ ಫಿಕ್ಸ್ ಆಗಿದೆ. ಸಿದ್ದರಾಮಯ್ಯರ ಸರ್ಕಾರ 80 ಪರ್ಸೆಂಟ್ ಸರ್ಕಾರ. ತಾಲೂಕು ಕಚೇರಿಗಳಲ್ಲಿ ತಹಶಿಲ್ದರ್​ಗಳು ಲಂಚ ಕೇಳುತ್ತಾರೆ. ಲೆಕ್ಕಾಧಿಕಾರಿಗಳು ಲಂಚ ಕೇಳುತ್ತಾರೆ. ಪಿಡಿಓಗಳು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಂಗಳೂರು ಹೊರವಲಯದ ಕಾವೂರು ಬಳಿ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು. ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಭಾಗಿಯಾಗಿದ್ದರು. ಸಿದ್ದರಾಮಯ್ಯರನ್ನು ಲೂಟಿಕೋರ, ಡಿಕೆ ಶಿವಕುಮಾರ್ ಅವರನ್ನು ಭ್ರಷ್ಟಾಚಾರಿ ಎಂದು ಘೋಷಣೆಗಳನ್ನು ಕೂಗಲಾಯಿತು. ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ಘೋಷಣೆಗಳೊಂದಿಗೆ ಧಿಕ್ಕಾರಗಳನ್ನೂ ಕೂಗಲಾಯಿತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us