ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಗಡಿ ಭಾಗದ ಭೇಟಿಯನ್ನು ದಿಢೀರ್ ರದ್ದುಪಡಿಸಿದ ಸಿಎಂ ಬೊಮ್ಮಾಯಿ
ಗಡಿ ಭಾಗದಲ್ಲಿ ಕೇರಳಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಅದನ್ನು ಆಧರಿಸಿ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ಮಂಗಳೂರು: ಕೊರೊನಾ ನಿಯಂತ್ರಣದ (Corona Control) ಕುರಿತು ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರವಾಸ ಬೆಳೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಡೇ ಕ್ಷಣದಲ್ಲಿ ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ನಿನ್ನೆಯೇ ಕರಾವಳಿಗೆ ಆಗಮಿಸಿರುವ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಗಳೊಂದಿಗೆ ಸಭೆ ನಡೆಸಿದ್ದು, ಇಂದು ಗಡಿ ಭಾಗಕ್ಕೆ ಭೇಟಿ ನೀಡಲು ನಿಶ್ಚಯಿಸಿದ್ದರು. ಆದರೆ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ತಮ್ಮ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಗಡಿಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಲಾಗಿತ್ತು. ಆದರೆ, ಗಡಿ ಭಾಗದಲ್ಲಿ ಕೇರಳಿಗರಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಅದನ್ನು ಆಧರಿಸಿ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ನಿನ್ನೆ ಉಡುಪಿಯಲ್ಲೇ ವಾಸ್ತವ್ಯ ಇದ್ದ ಅವರು ಇಂದು ನೇರವಾಗಿ ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಬೆಳಗ್ಗೆ 9.30 ಕ್ಕೆ ಮಂಗಳೂರಿಗೆ ಹೊರಡಲಿರುವ ಸಿಎಂ, ರಸ್ತೆ ಮಾರ್ಗದ ಮೂಲಕ ಬಜ್ಪೆ ವಿಮಾನ ನಿಲ್ದಾಣ ತಲುಪಲಿದ್ದು, 11:30 ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ನಿಯಮ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಕೂಡ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಸೂಚಿಸಲಾಗಿದೆ. ಸ್ವಾತಂತ್ರ್ಯ ದಿನ ಆಗಿದ್ದರೂ ವೀಕೆಂಡ್ ಕರ್ಫ್ಯೂ ಇರಲಿದೆ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸ್ವಾತಂತ್ರ್ಯೋತ್ಸವ ದಿನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ನಿಯಮ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಲು ಸೂಚನೆ ನೀಡಿದ್ದಾರೆ. ಹೆಚ್ಚು ಜನರನ್ನು ಸೇರಿಸದೇ ಧ್ವಜಾರೋಹಣ ಮಾಡಬೇಕು ಎಂದು ಆದೇಶ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ವರದಿ ಆಗಿದೆ. ಹೀಗಾಗಿ, ಸಾರ್ವಜನಿಕರು ಶಿಷ್ಟಾಚಾರ ಪಾಲಿಸಿ ಜವಾಬ್ದಾರಿಯುತವಾಗಿ ಸ್ವಾತಂತ್ರ್ಯ ದಿನ ಆಚರಿಸಲು ಸೂಚನೆ ಕೊಡಲಾಗಿದೆ. ಧ್ವಜಾರೋಹಣ ಸ್ಥಳದಲ್ಲಿ ಹೆಚ್ಚು ಜನ ಸೇರಿಸದೇ ಕೊವಿಡ್ ನಿಯಮ ಪಾಲಿಸಲು ಹೇಳಲಾಗಿದೆ. ವಾರಾಂತ್ಯ ಕರ್ಪ್ಯೂ ಹಿನ್ನೆಲೆ ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಮಧ್ಯೆಯೂ ಸ್ವಾತಂತ್ರ್ಯ ದಿನಾಚರಣೆಯ ಘನತೆಗೆ ಧಕ್ಕೆ ಬಾರದಂತೆ ಆಚರಿಸಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೊರೊನಾ ಆತಂಕ; ಇಂದು ಹಾಗೂ ನಾಳೆ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Corona 3rd Wave: ಬೆಂಗಳೂರಿನಲ್ಲಿ ಕೊರೊನಾ 3ನೇ ಅಲೆ ಶುರು, 10 ದಿನಗಳಲ್ಲಿ 505 ಮಕ್ಕಳಲ್ಲಿ ಸೋಂಕು ಪತ್ತೆ
(CM Basavaraj Bommai cancels his visit to Dakshina Kannada Kerala Borders as there is a chance of protest from people)