ಬಿಜೆಪಿಯ ಭದ್ರಕೋಟೆ ಎಂದು ಕರೆಸಿಕೊಂಡಿರುವ ರಾಜ್ಯ ಕರಾವಳಿಯಲ್ಲಿ ಈ ಬಾರಿ ಅತೀ ಹೆಚ್ಚಿನ ಸ್ಥಾನ ಗೆಲ್ಲಬೇಕು ಎಂಬ ಪ್ರಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ. ಆದ್ರೆ ಈ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ ನಾಯಕರು ವಾಸ್ತು ಶಾಸ್ತ್ರದ (Vasthu) ಮೊರೆ ಹೋದ್ರಾ ಎಂಬ ಚರ್ಚೆ ಶುರುವಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ನವೀಕರಣಕ್ಕೆ ಕೈ ಹಾಕಿರುವುದು ವಾಸ್ತು ಚರ್ಚೆಯನ್ನು ಹುಟ್ಟುಹಾಕಿದೆ.
ದಕ್ಷಿಣಕನ್ನಡ ಕಾಂಗ್ರೆಸ್‌ಗೆ ಕಾಡ್ತಿದ್ಯಾ ವಾಸ್ತು ದೋಷ..? ಹೌದು..ಚುನಾವಣೆ ಹೊತ್ತಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ (Dakshina Kannada Congress) ನಾಯಕರು ವಾಸ್ತು ಮೊರೆ ಹೋದರಾ ಎಂಬ ಗುಸುಗುಸು ಚರ್ಚೆ ಶುರುವಾಗಿದೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ (Mallikatte, Mangalore) ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ಮೆಟ್ಟಿಲು ನವೀಕರಣ ಕಾಮಗಾರಿ ನಡೆಸುತ್ತಿರುವುದು ಈ ಚರ್ಚೆಗೆ ಕಾರಣವಾಗಿದೆ. 2016ರಲ್ಲಿ ಉದ್ಘಾಟನೆಗೊಂಡಿದ್ದ ಈ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲಿತ್ತು.
ಆದ್ರೆ ಇದೀಗ ಈ ಎಂಟು ಮೆಟ್ಟಿಲಿನ ಬದಲಾಗಿ ಇನ್ನೊಂದು ಮೆಟ್ಟಿಲನ್ನು ಸೇರ್ಪಡೆಗೊಳಿಸಿ ಒಟ್ಟು ಒಂಬತ್ತು ಮೆಟ್ಟಿಲು ಇರುವಂತೆ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ಮಾಡಲಾಗುತಿದ್ಯಾ ಎಂಬ ಗುಸು ಗುಸು ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ ಎಂಬ ಮಾಹಿತಿ ನೀಡಿದವರು ಮಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ನವೀನ್.
ಹೆಚ್ಚಿನ ಮಂದಿ ಮನೆ ಸೇರಿದಂತೆ ಕಚೇರಿಗಳನ್ನು ನಿರ್ಮಿಸುವ ಸಂದರ್ಭ ವಾಸ್ತುಶಾಸ್ತ್ರವನ್ನು ನಂಬುತ್ತಾರೆ. ವಾಸ್ತು ಪದ್ಧತಿ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ. ಮೂರು, ಐದು. ಏಳು ಹೀಗೆ ಮೆಟ್ಟಿಲುಗಳ ಸಂಖ್ಯೆ ಇರುತ್ತದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಈ ಕಚೇರಿಯಲ್ಲಿ ಎಂಟು ಮೆಟ್ಟಿಲು ಇದ್ದು ಇದು ದೋಷ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಾವಿನ ಮನೆ ಸೇರಿದ ಮೂರು ತಿಂಗಳ ಗರ್ಭಿಣಿ: ಅಬಾರ್ಷನ್ ಬೇಡವೆಂದವಳು ಟ್ಯಾಬ್ಲೆಟ್ ನುಂಗಿದ್ಯಾಕೆ?
2016ರಲ್ಲಿ ಈ ಕಚೇರಿ ಉದ್ಘಾಟನೆಯಾದ ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಹೀನಾಯ ಸೋತಿತ್ತು. ಹೀಗಾಗಿ ಈ ಬಾರಿ ಚುನಾವಣೆಗೂ ಮುನ್ನ ಕಚೇರಿಗೆ ಹೊಕ್ಕುವ ಬಾಗಿಲಿನಲ್ಲಿಯೇ ಇರುವ ಅಪದ್ಧವನ್ನು ನಿವಾರಣೆ ಮಾಡುವುದಕ್ಕೆ ಈ ಕ್ರಮ ಎಂದು ಹೇಳಲಾಗಿದೆ.
ಆದ್ರೆ ಈ ವಾಸ್ತು ವಾದವನ್ನು ನಿರಾಕರಿಸಿರುವ ಕಾಂಗ್ರೆಸ್ ನಾಯಕರು ವಾಸ್ತುವಿನ ಕಾರಣಕ್ಕೆ ಮೆಟ್ಟಿಲುಗಳ ಸಂಖ್ಯೆ ಹೆಚ್ಚಿಸಿದ್ದಲ್ಲ. ಮೆಟ್ಟಿಲು ಹತ್ತಲು ಸುಲಭವಾಗಲು ಹಾಗೂ ವಾಟರ್ ಟ್ಯಾಂಕ್ ದುರಸ್ಥಿಗಾಗಿ ಈ ನವೀಕರಣ ಮಾಡಲಾಗುತ್ತಿದೆ ಎನ್ನುತ್ತಾರೆ ಸಾಹುಲ್ ಹಮೀದ್, ಅಧ್ಯಕ್ಷರು- ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ-ದಕ್ಷಿಣ ಕನ್ನಡ.
ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲಿನ ನವೀಕರಣ ಕಾಮಗಾರಿ ನಡೆಯುತ್ತಿರುವುದಂತು ಸತ್ಯ. ಆದ್ರೆ ಕಾರಣ ಮಾತ್ರ ನಿಗೂಢವಾಗಿದ್ದು, ಇದರ ಪ್ರಭಾವ ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಬೀರಲಿದೆ ಎಂದು ರಿಸಲ್ಟ್ ಬಂದ ಬಳಿಕ ಗೊತ್ತಾಗಲಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:41 am, Thu, 15 December 22