ಮಂಗಳೂರು: ಪ್ರವೀಣ್ ನೆಟ್ಟಾರ(Praveen Nettar) ಹತ್ಯೆಯಿಂದ ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ(Hindu Activist) ಆಕ್ರೋಶ ಹೆಚ್ಚಾಗಿದೆ. ಅಲ್ಲದೆ ಕಾರ್ಯಕರ್ತರು ರಾಜೀನಾಮೆ ನೀಡುವ ಮೂಲಕ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಇನ್ನು ಕೆಂಡವಾಗಿದ್ದ ಕರಾವಳಿಯನ್ನ ಶಾಂತವಾಗಿಸೋ ಪ್ರಯತ್ನ ನಡೆಯುತ್ತಿರುವಾಗಲೇ ಮತ್ತೊಂದು ಘೋರ ಹತ್ಯೆ ನಡೆದಿದೆ. ಎರಡು ದಿನಗಳಲ್ಲಿ ಎರಡು ಕೊಲೆಗಳಾಗಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಕಟ್ಟೆಚ್ಚರಕ್ಕೆ ಆದೇಶ ಹೊರಡಿಸಲಾಗಿದೆ.
ಮಂಗಳೂರುನಗರ ಸೇರಿದಂತೆ ಜಿಲ್ಲಾದ್ಯಂತ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಅಂಗಡಿಗಳು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಇಂದಿನಿಂದ(ಜುಲೈ 29) ಆಗಸ್ಟ್ 1ರ ಬೆಳಗ್ಗೆ 6ರವರೆಗೆ ಆದೇಶ ಅನ್ವಯವಾಗಲಿದೆ. ತುರ್ತು ಸೇವೆಗಳನ್ನ ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಮಾಡಲು ತಿಳಿಸಲಾಗಿದೆ. ಹಾಗೂ ಎಲ್ಲಾ ಗ್ರಾ.ಪಂ. ಮತ್ತು ಸ್ಥಳೀಯಸಂಸ್ಥೆಗಳಿಗೂ ಈ ಆದೇಶ ಅನ್ವಯವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧ
ಇಡೀ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ಬಜ್ಪೆ, ಪಣಂಬೂರು, ಮುಲ್ಕಿ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದ್ದು ಜಿಲ್ಲೆಯಲ್ಲಿ 2 ದಿನ ಮದ್ಯ ಮಾರಾಟ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಇನ್ನು ರಾಜ್ಯದ ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದಕ್ಷಿಣ ವಲಯದ ಎಲ್ಲ ಕಡೆ ಚೆಕ್ ಪೋಸ್ಟ್ ಹಾಕಿದ್ದೇವೆ. ರೌಡಿಗಳ ಮೇಲೆ ನಿಗಾವಹಿಸಲಾಗಿದೆ. ಎಲ್ಲ ಸಮುದಾಯಗಳ ಮುಖಂಡರ ಜತೆ ಮಾತನಾಡಿದ್ದೇವೆ. ಈಗಾಗಲೇ ನಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಸಣ್ಣ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಚಾಮರಾಜನಗರದಲ್ಲಿ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಹೈ ಅಲರ್ಟ್
ಕರಾವಳಿಯಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಕಾಫಿನಾಡಿನ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಹೈ ಅಲರ್ಟ್ ಮಾಡಲಾಗಿದೆ. ಪ್ರವಾಸಿಗರು, ಹೊರ ಜಿಲ್ಲೆಗಳ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿಗರ ದಾಖಲಾತಿಗಳನ್ನ ಕಡ್ಡಾಯಗೊಳಿಸಿ ಹೋಂಸ್ಟೇ, ರೆಸಾರ್ಟ್ ಮಾಲೀಕರಿಗೆ ಖಡಕ್ ಸೂಚನೆ ನೀಡಲಾಗಿದೆ. ಜಿಲ್ಲೆಗೆ ಬರುವ ವಾಹನಗಳ ಮೇಲೂ ತೀವ್ರ ನಿಗಾ ಇಡಲಾಗಿದೆ. ಪ್ರತಿಯೊಬ್ಬರ ಚಲನ-ವಲನಗಳನ್ನ ಸೂಕ್ಷ್ಮವಾಗಿ ಗಮನಿಸುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಎಸ್ಪಿ ಅಕ್ಷಯ್ ಆದೇಶ ಹೊರಡಿಸಿದ್ದಾರೆ.
Published On - 5:39 pm, Fri, 29 July 22