Breaking News: ಎನ್ಐಎಗೆ ಪ್ರವೀಣ್ ನೆಟ್ಟಾರು ಹತ್ಯೆ ತನಿಖೆಯ ಹೊಣೆ
NIA Investigation: ಈ ಪ್ರಕರಣವು ಅಂತರರಾಜ್ಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲು ಕರ್ನಾಟಕ ಸರ್ಕಾರವು ತೀರ್ಮಾನ ಮಾಡಿದೆ.
ಬೆಂಗಳೂರು: ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (National Investigation Agency – NIA) ವಹಿಸಲಾಗಿದೆ. ಈ ಪ್ರಕರಣವು ಅಂತರರಾಜ್ಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲು ಕರ್ನಾಟಕ ಸರ್ಕಾರವು ತೀರ್ಮಾನ ಮಾಡಿದೆ. ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಈ ನಿರ್ಧಾರ ತೆಗೆದುಕೊಂಡರು.
ದಕ್ಷಿಣ ಕನ್ನಡ ಮತ್ತು ಕೇರಳ ಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಚರ್ಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮೀಸಲು ಪಡೆಯ (KSRP) ಬೆಟಾಲಿಯನ್ ನಿಯೋಜಿಸಲಾಗುವುದು. ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಫಾಜಿಲ್ ಕೊಲೆ ಪ್ರಕರಣದ ತನಿಖೆಗೂ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಆ ಪ್ರಕರಣದ ತನಿಖೆಯೂ ಚುರುಕಾಗಿದೆ ಎಂದರು. ಶೀಘ್ರದಲ್ಲೇ ಎಲ್ಲ ಸಮುದಾಯದ ಮುಖಂಡರ ಜತೆ ಶಾಂತಿ ಸಭೆ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇವೆ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಕುರಿತು ಡಿಐಜಿ ಜೊತೆಗೆ ಚರ್ಚಿಸಿದ್ದೇನೆ. ಇದು ಸಂಘಟಿತ ಅಪರಾಧ ಮತ್ತು ಬೇರೆ ರಾಜ್ಯದವರು ಪಾಲ್ಗೊಂಡಿರುವ ಶಂಕೆಯಿದೆ. ಅಗತ್ಯ ಮಾಹಿತಿ ಕಲೆಹಾಕಿದ ಮೇಲೆ ಕೇರಳ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ. ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸುತ್ತಿದ್ದೇವೆ ಎಂದರು.
ಎನ್ಐಎ ತನಿಖೆ: ಏನಿದರ ಪ್ರಾಮುಖ್ಯತೆ
ಭಯೋತ್ಪಾದಕ ಕೃತ್ಯಗಳ ತನಿಖೆಯ ಹೊಣೆಯನ್ನು ಅದರ ತೀವ್ರತೆ ವಿಶ್ಲೇಷಿಸಿ ಎನ್ಐಎಗೆ ವಹಿಸುವುದು ವಾಡಿಕೆ. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿಯ ನಂತರ ಎನ್ಐಎ ರಚಿಸಲಾಯಿತು. ಭಯೋತ್ಪಾದನಾ ಪ್ರಕರಣಗಳ ತ್ವರಿತ ತನಿಖೆ ಮತ್ತು ಭಯೋತ್ಪಾದಕರ ಮೇಲೆ ಕಣ್ಣಿಡುವುದು ಎನ್ಐಎ ಸಿಬ್ಬಂದಿಯ ಮುಖ್ಯ ಜವಾಬ್ದಾರಿ.
ಇದೀಗ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನೂ ಎನ್ಐಎ ತನಿಖೆಗೆ ವಹಿಸಲಾಗಿದೆ. ಪ್ರವೀಣ್ ಹತ್ಯೆಯ ಹಿಂದೆ ಇರುವ ಸಂಘಟನೆಗಳ ಕೈವಾಡದ ಬಗ್ಗೆ ಈ ತನಿಖೆಯ ನಂತರ ಮಾಹಿತಿ ಸಿಗಲಿದೆ. ಪ್ರಕರಣ ಸಂಬಂಧ ಈಗಾಗಲೇ ಕರ್ನಾಟಕ ಪೊಲೀಸರು ಬಂಧಿಸಿರುವ ಅಥವಾ ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳನ್ನೂ ಮುಂದಿನ ದಿನಗಳಲ್ಲಿ ಎನ್ಐಎ ಸಿಬ್ಬಂದಿ ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಕರ್ನಾಟಕದಲ್ಲಿಯೂ ಎನ್ಐಎ ಶಾಖೆ ತೆರೆಯಲು ಕಳೆದ ಜನವರಿಯಲ್ಲಿ ಗೃಹ ಇಲಾಖೆ ಒಪ್ಪಿಗೆ ಸೂಚಿಸಿತ್ತು. ಈ ಸಂಬಂಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಕಟ್ಟೆಚ್ಚರಕ್ಕೆ ಆದೇಶ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಆದೇಶ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ 6ರಿಂದ ಅಂಗಡಿ ಮುಂಗಟ್ಟು ಬಂದ್ಗೆ ಆದೇಶಿಸಿದ್ದಾರೆ. ಇಂದಿನಿಂದ ಆಗಸ್ಟ್ 1ರ ಬೆಳಗ್ಗೆ 6ರವರೆಗೆ ಅಂಗಡಿ ಬಂದ್ಗೆ ಆದೇಶಿಸಿ, ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ತುರ್ತು ಸೇವೆಗಳನ್ನ ಹೊರತು ಪಡಿಸಿ ಎಲ್ಲಾ ಗ್ರಾ.ಪಂ. ಮತ್ತು ಸ್ಥಳೀಯ ಸಂಸ್ಥೆಗಳಿಗೂ ಈ ಆದೇಶ ಅನ್ವಯವಾಗಿತ್ತದೆ.
Published On - 2:34 pm, Fri, 29 July 22