ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ಕರೆ

ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ಕರೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2022 | 3:08 PM

ಬೆಂಗಳೂರು: ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ (Tricolour Flag) ವನ್ನು ಹಾರಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ. ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದರು. ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ; Tiranga Rally 2022: ಶ್ರೀನಗರದಿಂದ ಲೇಹ್​ಗೆ ತಿರಂಗಾ ಯಾತ್ರೆ; ಇಂದು ಕಾರ್ಗಿಲ್​ನಲ್ಲಿ ತೇಜಸ್ವಿ ಸೂರ್ಯ ಧ್ವಜಾರೋಹಣ

ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ.

ಸಾರ್ವಜನಿಕರಲ್ಲಿ ಮನವಿ!

ಭಾರತದ ಎಲ್ಲಾ ಪ್ರಜೆಗಳಲ್ಲೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರ ಭಕ್ತಿಯನ್ನು ಇಮ್ಮಡಿಗೊಳಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರೂ ಕೂಡಾ ಕೈಮಗ್ಗ ಅಥವಾ ವಿದ್ಯುತ್‌ ಮಗ್ಗದಿಂದ ಹತ್ತಿ, ಪಾಲಿಯೆಸ್ಟರ್‌, ಉಣ್ಣೆ ರೇಷ್ಮೆ, ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರ ಧ್ವಜವನ್ನು ಆಗಸ್ಟ್ 13ರಿಂದ 15 ರವರೆಗೆ ಮೂರು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶ ಪ್ರೇಮ ಮೆರೆಯಬೇಕೆಂಬುದು ರಾಜ್ಯ ಸರ್ಕಾರದ ಇಚ್ಛೆಯಾಗಿದೆ. ಆದಕಾರಣ, ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಮುಖ್ಯ ಕಾರ್ಯದರ್ಶಿ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tricolour Flag 24×7: ಇನ್ನು ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಯಾವಾಗ ಬೇಕಾದರೂ ಹಾರಿಸಬಹುದು

ಅಲ್ಲದೆ, ರಾಷ್ಟ್ರ ಧ್ವಜದ ಮುಂದೆ ನಿಂತು ಸೆಲ್ವಿ ತೆಗೆದು ಹರ್ ಘರ್ ತಿರಂಗಾ ಅಂತರ್ಜಾಲ ತಾಣ https://harghartiranga.com ರಲ್ಲಿ ಅಪ್‌ ಲೋಡ್‌ ಮಾಡುವ ಮೂಲಕ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮವನ್ನು ದುಪ್ಪಟು ಗೊಳಿಸುವ ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ದೇಶಾಭಿಮಾನವನ್ನು ಪ್ರದರ್ಶಿಸೋಣ ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಹೇಳಿದ್ದಾರೆ.