ಮಂಗಳೂರು: ಸೇತುವೆ (Bridge) ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ನೀರಿನಲ್ಲಿ ಕೊಚ್ಚಿಹೋಗಿದ್ದ ಇಬ್ಬರ ಶವಗಳು ಇಂದು (ಜುಲೈ 12) ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಬಳಿ ಜುಲೈ 10ರ ತಡರಾತ್ರಿ ವೇಗವಾಗಿ ಬಂದಿದ್ದ ಕಾರು ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಹೊಳೆಗೆ ಬಿದ್ದಿತ್ತು. ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಕುಂಡಡ್ಕ ಗ್ರಾಮದ 25 ವರ್ಷದ ಧನುಷ್ ಹಾಗೂ ಕನ್ಯಾನ ಗ್ರಾಮದ 26 ವರ್ಷದ ಧನುಷ್ ಸಾವನ್ನಪ್ಪಿದ್ದರು. ಎರಡು ದಿನಗಳಿಂದ ಇಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿತ್ತು.
ಕಾರು ಬಿದ್ದ 250 ಮೀ. ದೂರದಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಮೃತರು ಸಂಬಂಧಿಕರಾಗಿದ್ದು, ಟೈಲ್ಸ್ ಮತ್ತು ಟಿಂಬರ್ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನವೇ ಎಸ್‌ಡಿಆರ್‌ಎಫ್ ಸಿಬ್ಬಂದಿ ಕೊಚ್ಚಿಹೋಗಿದ್ದ ಕಾರನ್ನು ಪತ್ತೆ ಹಚ್ಚಿದ್ದರು. ಆದರೆ ಮೃತದೇಹ ಸಿಕ್ಕಿರಲಿಲ್ಲ.ಗುತ್ತಿಗಾರು ವಿಪತ್ತು ನಿರ್ವಹಣಾ ತಂಡ ಸಹಾಯದಿಂದ ಮೃತದೇಹಗಳನ್ನ ಹೊರಗೆ ತೆಗೆಯಲಾಗುತ್ತಿದೆ. ಹಗ್ಗ ಬಳಸಿ ಒಂದು ಬದಿಯಿಂದ ಮೃತದೇಹಗಳನ್ನ ಮತ್ತೊಂದು ಬದಿಗೆ ಎಳೆದು ತರಲಾಗಿದೆ. ಇನ್ನು ಅಪಘಾತದ ವೇಗಕ್ಕೆ ಸೇತುವೆಯ ತಡೆ ಬೇಲಿ ಜಖಂ ಆಗಿದೆ. ಮೂರು ಕಬ್ಬಿಣ ಕಂಬಗಳು ಮುರಿದು ನೇತಾಡುತ್ತಿವೆ.
ಇದನ್ನೂ ಓದಿ: Chamarajpet Bandh Live: ಚಾಮರಾಜಪೇಟೆ ಬಂದ್: ಪ್ರತಿಭಟನಾಕಾರರನ್ನು ಚದುರಿಸುತ್ತಿರುವ ಪೊಲೀಸ್ ಪಡೆ
ಪುತ್ತೂರಿನಲ್ಲಿ ಭೂಕುಸಿತ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಪುತ್ತೂರಿನ ಹೆಬ್ಬಾರಬೈಲ್ನಲ್ಲಿ ಭೂಕುಸಿತವಾಗಿದೆ. ಭೂಕುಸಿತದಿಂದ ಎರಡು ಮನೆಗಳು ಅಪಾಯದ ಅಂಚಿನಲ್ಲಿವೆ. ಶರೀಫ್ ಮತ್ತು ಜಾರ್ಜ್ ಎಂಬುವರ ಮನೆಗಳು ಕುಸಿಯುವ ಭೀತಿ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಮನೆ ಮಾಲೀಕ ಜಾರ್ಜ್, ಮನೆಯನ್ನು 10 ವರ್ಷದ ಹಿಂದೆ ಕಟ್ಟಿಸಿದ್ದೆವು. 2018 ರಿಂದ ಸುರಿತಿರುವ ಮಳೆಗೆ ಮಣ್ಣು ಕುಸಿದಿದೆ. ಇವತ್ತು ನೋಡಿದಾಗ ಒಂದು ಪಿಲ್ಲರ್ ಕುಸಿದಿದೆ. ವಾರ್ಡ್ ಸದಸ್ಯರಿಗೆ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದೇವೆ. ಇವತ್ತು ಬೆಳಗ್ಗೆ ಕೂಡ ಫೋನ್ ಮಾಡಿ ಶರೀಫ್ಗೆ ಹೇಳಿದ್ದೇನೆ. ಇವತ್ತು ಬೆಳಗ್ಗೆಯೇ ಇಂಜಿನಿಯರ್ ಬಂದಿದ್ದರು. ಮನೆ ಹಿಂದೆ ಹೋಗಬೇಡಿ ಎಂದಿದ್ದಾರೆ ಎಂದು ತಿಳಿಸಿದರು.
Published On - 10:33 am, Tue, 12 July 22