Tamil Nadu Politics: ಎಐಎಡಿಎಂಕೆ ವಿಭಜನೆಯಿಂದ ಡಿಎಂಕೆಗೆ ಲಾಭ, ಬಿಜೆಪಿ ಹೊಸ ಅವಕಾಶ

ಕಾಂಗ್ರೆಸ್‌, ಎಡಪಕ್ಷಗಳು ಮತ್ತು ಇತರ ಸಣ್ಣಪುಟ್ಟ ರಾಜಕೀಯ ಪಕ್ಷಗಳ ಬೆಂಬಲ ಹೊಂದಿರುವ ಡಿಎಂಕೆ ಈಗಾಗಲೇ ತಮಿಳುನಾಡಿನಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.

Tamil Nadu Politics: ಎಐಎಡಿಎಂಕೆ ವಿಭಜನೆಯಿಂದ ಡಿಎಂಕೆಗೆ ಲಾಭ, ಬಿಜೆಪಿ ಹೊಸ ಅವಕಾಶ
ಡಿಎಂಕೆ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷದ ಚಿಹ್ನೆಗಳು
Follow us
| Updated By: sandhya thejappa

Updated on: Jul 12, 2022 | 9:11 AM

ಚೆನ್ನೈ: ತಮಿಳುನಾಡಿನ ಸದ್ಯದ ರಾಜಕೀಯ ಬೆಳವಣಿಗೆಗಳಿಂದ (Tamil Nadu Politics) ಡಿಎಂಕೆಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. ಬಿಜೆಪಿಗೂ (BJP) ಸ್ವಲ್ಪಮಟ್ಟಿಗಿನ ರಾಜಕೀಯ ಲಾಭವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಎಐಎಡಿಎಂಕೆ (AIADMK) ಪಕ್ಷದ ಬಹುತೇಕ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಎಡಪ್ಪಾಡಿ ಕೆ.ಪಳನಿಸ್ವಾಮಿ (Edappadi K Palaniswami) ಪರವಾಗಿಯೇ ಇದ್ದಾರೆ. ಓ.ಪನ್ನೀರ್‌ಸೆಲ್ವಂ (O Panneerselvam) ಅವರಿಗೆ ಮೊದಲಿನಿಂದಲೂ ಪಕ್ಷದೊಳಗೆ ಹೇಳಿಕೊಳ್ಳುವಂಥ ಬೆಂಬಲ ಇರಲಿಲ್ಲ.

ಇದೇ ಹೊತ್ತಿಗೆ ದಿವಂಗತ ನಾಯಕಿ ಜೆ.ಜಯಲಲಿತಾ ಅವರ ಆಪ್ತೆಯಾಗಿದ್ದ ವಿ.ಕೆ.ಶಶಿಕಲಾ ಸಹ ರಂಗಪ್ರವೇಶಿಸಿದ್ದಾರೆ. ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ಇಬ್ಬರೂ ಕೇವಲ ‘ನೆರಳುಗಳು’ ಎಂದು ಹೇಳಿದ್ದಾರೆ. ‘ನಿಜ’ ಏನೆಂದರೆ ನಾನು ನಿಜವಾದ ನಾಯಕಿ ಎಂದು ಪ್ರತಿಪಾದಿಸಿಕೊಂಡಿದ್ದಾರೆ. ಎಐಎಡಿಎಂಕೆ ಮುಖ್ಯಕಚೇರಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.

ಪಕ್ಷದ ಕಾರ್ಯಕರ್ತರು ತನ್ನ ಬೆನ್ನಿಗೆ ಮಾತ್ರ ನಿಲ್ಲಬಲ್ಲರು. ಪಕ್ಷದ ಒಡಕು, ಭಿನ್ನಮತಗಳನ್ನು ಶಮನಗೊಳಿಸಿ ಅಧಿಕಾರಕ್ಕೆ ತರುವ ಸಾಮರ್ಥ್ಯ ನನಗೆ ಮಾತ್ರವೇ ಇದೆ ಎಂದು ಹೇಳಿಕೊಂಡಿರುವ ಶಶಿಕಲಾ ಇಂದಿಗೂ ಎಐಎಡಿಎಂಕೆ ಚುಕ್ಕಾಣಿ ಹಿಡಿಯುವ ಆಸೆ ತಮಗಿರುವುದನ್ನು ವ್ಯಕ್ತಪಡಿಸಿದ್ದಾರೆ. ಶಶಿಕಲಾ ಅವರಿಗೆ ಮೊದಲಿನಿಂದಲೂ ಅವರ ದಾಯಾದಿ ಟಿಟಿವಿ ದಿನಕರನ್ ಅವರ ಬೆಂಬಲವಿದೆ. ಎಐಎಡಿಎಂಕೆ ಪರ, ಡಿಎಂಕೆ ವಿರೋಧಿ ಮತಗಳನ್ನು ಸೆಳೆಯುವ ಒಂದು ಶಕ್ತಿಯಾಗಿ ಟಿಟಿವಿ ದಿನಕರನ್ ಅವರನ್ನು ತಮಿಳುನಾಡು ರಾಜಕಾರಣದಲ್ಲಿ ಗುರುತಿಸಲಾಗುತ್ತದೆ.

ಇದನ್ನೂ ಓದಿ
Image
AIADMK Tussle: ಎಐಎಡಿಎಂಕೆ ಸಂಘರ್ಷ; ಇಪಿಎಸ್​ ಈಗ ಹೊಸ ಬಾಸ್​, ಪನ್ನೀರ್​ಸೆಲ್ವಂ ಉಚ್ಛಾಟನೆ
Image
ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ; ಕಚೇರಿಯ ಬಾಗಿಲು ಒಡೆದು, ರಸ್ತೆಯಲ್ಲೇ ಹೊಡೆದಾಟ
Image
ಪ್ರತ್ಯೇಕ ದೇಶದ ಕೂಗಿನ ಬೆನ್ನಲ್ಲೇ ತಮಿಳುನಾಡನ್ನು ಇಬ್ಭಾಗ ಮಾಡುವ ಪ್ರಸ್ತಾಪವಿಟ್ಟ ಬಿಜೆಪಿ ನಾಯಕ
Image
ತಮಿಳುನಾಡಿಗೆ ಆಡಿದ ಮಾತಿನಂತೆ ನಡೆದುಕೊಳ್ಳುವ ನಾಯಕನ ಅಗತ್ಯವಿದೆ: ವಿಕೆ ಶಶಿಕಲಾ

ಕಳೆದ ವರ್ಷ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (Amma Makkal Munnetra Kazhagam – AMMK) ಪಕ್ಷವು ಹಲವು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಮತಗಳನ್ನು ಸೆಳೆದು, ಡಿಎಂಕೆ ಗೆಲುವಿಗೆ ಕಾರಣವಾಗಿತ್ತು. ಎಐಎಡಿಎಂಕೆಯಲ್ಲಿ ಭಿನ್ನಮತ ಹೆಚ್ಚಾದಷ್ಟೂ ಡಿಎಂಕೆಗೆ ಅವಕಾಶಗಳು ಹೆಚ್ಚಾಗುತ್ತವೆ ಎಂದು ರಾಜಕೀಯ ವಿಶ್ಲೇಷಕ ದುರಾಯಿ ಕರುಣ ಹೇಳುತ್ತಾರೆ.

ಇದನ್ನೂ ಓದಿ: ಆ್ಯಪಲ್ ಸೈಡರ್ ವಿನೆಗರ್​ ಅನ್ನು ನಿತ್ಯ ಸೇವಿಸುವುದರಿಂದ ಏನೆಲ್ಲಾ ಅಡ್ಡಪರಿಣಾಮಗಳಿವೆ, ಇಲ್ಲಿದೆ ಮಾಹಿತಿ

ದ್ರಾವಿಡವಾದಿಗಳು ಮತ್ತು ಎಂಜಿಆರ್‌-ಅಮ್ಮಾ ಅಭಿಮಾನಿಗಳು ಎಐಎಡಿಎಂಕೆಯ ಪರಂಪರಾಗತ ಮತಬ್ಯಾಂಕ್‌ಗಳಾಗಿದ್ದಾರೆ. ದ್ರಾವಿಡವಾದವನ್ನೇ ಮೂಲಾಧಾರವಾಗಿ ಹೊಂದಿರುವ ವಿಚಾರಧಾರೆಯನ್ನು ಎಐಎಡಿಎಂಕೆ ಹೊಂದಿದೆ. ಆದರೆ ಡಿಎಂಕೆಯನ್ನು ಪ್ರತಿಹಂತದಲ್ಲಿಯೂ ವಿರೋಧಿಸುವುದು ಅದರ ರಣತಂತ್ರ. ಜನಪ್ರಿಯ ಚಿತ್ರನಟರಾಗಿದ್ದ ಎಂ.ಜಿ.ರಾಮಚಂದ್ರನ್ ಅವರ ಅಭಿಮಾನಿಗಳು ಇಂದಿಗೂ ಎಐಎಡಿಎಂಕೆಯ ಮತದಾರರಾಗಿ ಉಳಿದುಕೊಂಡಿದ್ದಾರೆ.

ಕಾಂಗ್ರೆಸ್‌, ಎಡಪಕ್ಷಗಳು ಮತ್ತು ಇತರ ಸಣ್ಣಪುಟ್ಟ ರಾಜಕೀಯ ಪಕ್ಷಗಳ ಬೆಂಬಲ ಹೊಂದಿರುವ ಡಿಎಂಕೆ ಈಗಾಗಲೇ ತಮಿಳುನಾಡಿನಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. 10 ವರ್ಷಗಳ ಸುದೀರ್ಘ ಅಂತರದ ನಂತರ ಅಧಿಕಾರ ಹಿಡಿದಿರುವ ಡಿಎಂಕೆ ಹಿಡಿತ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2019ರ ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ನಿಚ್ಚಳ ಜಯ ದಾಖಲಿಸಿದವು. ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗಮನಾರ್ಹ ಪ್ರಮಾಣದ ಸ್ಥಾನಗಳನ್ನು ಜಯಿಸುವ ಇಚ್ಛೆ ಹೊಂದಿದೆ. ಆದರೆ ಎಐಎಡಿಎಂಕೆಯ ಒಡಕು ಬಿಜೆಪಿಯ ಆಶಯಗಳಿಗೆ ತಣ್ಣೀರು ಎರಚಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ದುರಾಯಿ ಕರುಣ.

ಎಐಡಿಎಂಕೆ ಬೆಳವಣಿಗೆಗಳ ಬಗ್ಗೆ ಬಿಜೆಪಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ. ‘ಇದು ಆ ಪಕ್ಷದ ಆಂತರಿಕ ವಿಚಾರ. ನಾವು ಪ್ರತಿಕ್ರಿಯಿಸುವಂಥದ್ದು ಏನೂ ಇಲ್ಲ. ಚುನಾವಣಾ ಮೈತ್ರಿಯ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಪ್ರತಿಕ್ರಿಯಿಸಲಾಗುವುದು’ ಎಂದು ಬಿಜೆಪಿಯ ತಮಿಳುನಾಡು ಘಟಕದ ಉಪಾಧ್ಯಕ್ಷ ನಾರಾಯಣ ತಿರುಪತಿ ಪ್ರತಿಕ್ರಿಯಿಸಿದರು.

1989ರಲ್ಲಿಯೂ ಎಐಎಡಿಎಂಕೆಯ ಭಿನ್ನಮತವು ಡಿಎಂಕೆಗೆ 13 ವರ್ಷಗಳ ನಂತರ ಅಧಿಕಾರ ತಂದುಕೊಂಡಿತ್ತು. ಈಗ ಡಿಎಂಕೆ ಅಧಿಕಾರದಲ್ಲಿರುವಾಗ ಒಡಕು ಮೂಡಿರುವುದರಿಂದ ಡಿಎಂಕೆ ತನ್ನ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. 2024ರವರೆಗೆ ರಾಜ್ಯದಲ್ಲಿ ಯಾವುದೇ ಚುನಾವಣೆ ಇಲ್ಲ. ಹೀಗಾಗಿ ಬಣ ರಾಜಕಾರಣಕ್ಕೆ ಮತ್ತು ಬೆಂಬಲಿಗರ ಕ್ರೋಡೀಕರಣಕ್ಕೆ ಸಾಕಷ್ಟು ಸಮಯಾವಕಾಶ ಸಿಕ್ಕಂತೆ ಆಗಿದೆ. ಆದರೆ ಡಿಎಂಕೆಗೆ ಪರ್ಯಾಯವಾಗಿ ತಮಿಳುನಾಡಿನ ರಾಜಕೀಯ ಶಕ್ತಿಯಾಗಿದ್ದ ಎಐಎಡಿಎಂಕೆ ಈ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎಂದು ಮತ್ತೋರ್ವ ರಾಜಕೀಯ ವಿಶ್ಲೇಷಕ ಎಂ.ಭರತ್ ಕುಮಾರ್ ಹೇಳಿದರು.

ಇದನ್ನೂ ಓದಿ: Karnataka Rain: ಕೊಡಗಿನಲ್ಲಿ ಭಾರಿ ಮಳೆ, ಶಾಲೆಗಳಿಗೆ ಇಂದು ರಜೆ, ಸಿಎಂ ಬೊಮ್ಮಾಯಿ ಜಿಲ್ಲೆಗೆ ದೌಡು

ಕೆ.ಅಣ್ಣಾಮಲೈ ಅವರ ನಾಯಕತ್ವದಲ್ಲಿ ಬಿಜೆಪಿ ಸಂಘಟನೆಯನ್ನು ಚುರುಕಾಗಿ ವಿಸ್ತರಿಸುತ್ತಿದೆ. ಡಿಎಂಕೆ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನಗಾಣಿಸಲು ಪ್ರಯತ್ನ ಪಡುತ್ತಿದೆ. ಡಿಎಂಕೆ ಪರ ಇರುವ ಕಾರ್ಯಕರ್ತರನ್ನು ಸೆಳೆಯುವ ಯತ್ನಗಳೂ ಅವ್ಯಾಹತ ಸಾಗಿವೆ. ಈವರೆಗೆ ತಮಿಳುನಾಡು ರಾಜಕಾರಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯದ ದಲಿತ ಮತಗಳನ್ನು ಕ್ರೋಡೀಕರಿಸಲು ಬಿಜೆಪಿ ಮುಂದಾಗಿದೆ. ತಮಿಳುನಾಡಿನ ದಲಿತ ನಾಯಕ ರೆಟ್ಟಮಾಲೈ ಶ್ರೀನಿವಾಸನ್ ಅವರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಪಾಠ ಇರಬೇಕು ಎಂದು ಹೋರಾಟ ಅರಂಭಿಸಿದೆ. ಮುಂದಿನ ದಿನಗಳಲ್ಲಿ ಖಂಡಿತ ಈ ಪ್ರಯತ್ನಗಳಿಗೆ ಫಲ ಸಿಗಲಿದೆ ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿಬರುತ್ತಿದೆ.