ಪ್ರತ್ಯೇಕ ದೇಶದ ಕೂಗಿನ ಬೆನ್ನಲ್ಲೇ ತಮಿಳುನಾಡನ್ನು ಇಬ್ಭಾಗ ಮಾಡುವ ಪ್ರಸ್ತಾಪವಿಟ್ಟ ಬಿಜೆಪಿ ನಾಯಕ
ತಮಿಳುನಾಡು ಇಬ್ಭಾಗವಾದರೆ ನಾವು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನವನ್ನು ಪಡೆಯಬಹುದು ಎಂದು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ (MK Stalin) ಎದುರಲ್ಲೇ ವೇದಿಕೆಯೊಂದರಲ್ಲಿ ಡಿಎಂಕೆ (DMK) ಸಂಸದ ಎ. ರಾಜಾ ತಮಿಳುನಾಡು ಪ್ರತ್ಯೇಕ ದೇಶವಾಗಬೇಕು ಎಂದು ಪರೋಕ್ಷ ಬೇಡಿಕೆ ಇಟ್ಟಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿದೆ. ಆ ಕುರಿತು ಚರ್ಚೆಗಳು, ವಾದಗಳು ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ (Nainar Nagendran) ಅವರು ತಮಿಳುನಾಡನ್ನು ಇಬ್ಭಾಗ ಮಾಡುವ ಪ್ರಸ್ತಾಪ ಮಾಡಿದ್ದಾರೆ.
ಆಡಳಿತಾರೂಢ ಡಿಎಂಕೆ ವಿರುದ್ಧ ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಮಾತನಾಡಿದ್ದು, ಎ. ರಾಜಾ ಅವರ ಭಾಷಣದ ನಂತರ ನನಗೆ ಒಂದು ಯೋಚನೆ ಹೊಳೆಯಿತು. ತಮಿಳುನಾಡು ಇಬ್ಭಾಗವಾದರೆ ನಾವು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನವನ್ನು ಪಡೆಯಬಹುದು ಎಂದಿದ್ದಾರೆ.
Open threat to .@PMOIndia &.@HMOIndia for separate Tamil Nadu demand by DMK MP in the presence of the TN CM. Why is .@CMOTamilnadu encouraging this separatist agenda? pic.twitter.com/xFHoVBlgmr
— Vishwatma ?? (@HLKodo) July 3, 2022
ತಮಿಳುನಾಡು ರಾಜ್ಯ ಸ್ವಾಯತ್ತತೆಗಾಗಿ ಒತ್ತಾಯಿಸಿ ಡಿಎಂಕೆ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎ. ರಾಜಾ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ಪಕ್ಷದ ಚುನಾಯಿತ ಸ್ಥಳೀಯ ಸಂಸ್ಥೆ ಸದಸ್ಯರನ್ನು ಉದ್ದೇಶಿಸಿ ಮಾತನಾಡುವಾಗ, ನಮ್ಮ ನಾಯಕರ ಸಮ್ಮುಖದಲ್ಲಿ ನಾನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇನೆ. ನಮ್ಮ ಮುಖ್ಯಮಂತ್ರಿಗಳು ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ನಾವು ಪೆರಿಯಾರ್ ದಾರಿ ಅನುಸರಿಸುವಂತೆ ಮಾಡಬೇಡಿ. ಹೀಗೇ ಬಿಟ್ಟರೆ ನಾವು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ. ನಮಗೆ ರಾಜ್ಯ ಸ್ವಾಯತ್ತತೆ ನೀಡಿ. ಅಲ್ಲಿಯವರೆಗೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು.
ತಮಿಳುನಾಡು 38 ಜಿಲ್ಲೆಗಳಲ್ಲಿ 234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ರಾಜ್ಯ ವಿಭಜನೆಗೆ ಜನಾಂದೋಲನವಾಗಲಿ, ರಾಜಕೀಯ ಬೇಡಿಕೆಯಾಗಲೀ ನಡೆದಿಲ್ಲ. ಬಿಜೆಪಿ ತಮಿಳುನಾಡಿನ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿದೆ.
ಈ ಬಗ್ಗೆ ಮಾತನಾಡಿರುವ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, “ತಮಿಳುನಾಡು ವಿಭಜನೆಯಾದರೆ ಬಿಜೆಪಿ ಈಗ ಹೊಂದಿರುವ ನಾಲ್ವರು ಶಾಸಕರನ್ನೂ ಕಳೆದುಕೊಳ್ಳುತ್ತದೆ. ಅವರನ್ನು ಹೊರಹಾಕಲಾಗುತ್ತದೆ. ಒಂದುವೇಳೆ ಅವರು ಇಬ್ಭಾಗ ಮಾಡಲು ಬಯಸಿದರೆ 403 ವಿಧಾನಸಭಾ ಸ್ಥಾನಗಳು ಮತ್ತು 83 ಸಂಸದರನ್ನು ಹೊಂದಿರುವ ಉತ್ತರ ಪ್ರದೇಶವನ್ನು ವಿಭಜಿಸಬೇಕು” ಎಂದಿದ್ದಾರೆ.
Published On - 8:26 am, Thu, 7 July 22