ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಪತ್ರ: ನೆರೆರಾಜ್ಯದ ಯೋಜನೆಗೆ ತಕರಾರು ತಪ್ಪು ಎಂದ ಗೋವಿಂದ ಕಾರಜೋಳ

ನದಿಯಲ್ಲಿ ಇನ್ನೂ 4.5 ಟಿಎಂಸಿ ನೀರು ಬಳಕೆಗೆ ನಮಗೆ ಸ್ಪಷ್ಟ ಅವಕಾಶ ಇದೆ. ಅದಕ್ಕೆ ಡಿಪಿಆರ್ ಮಾಡಿದ್ದೇವೆಯೇ ಹೊರತು ಹೆಚ್ಚುವರಿ ನೀರಿನ ಬಳಕೆಗೆ ನಾವು ಮುಂದಾಗಿಲ್ಲ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಪತ್ರ: ನೆರೆರಾಜ್ಯದ ಯೋಜನೆಗೆ ತಕರಾರು ತಪ್ಪು ಎಂದ ಗೋವಿಂದ ಕಾರಜೋಳ
ಮೇಕೆದಾಟು ಸಮೀಪ ಕಾವೇರಿ ಹರಿವು (ಸಂಗ್ರಹ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 14, 2022 | 2:59 PM

ಬೆಂಗಳೂರು: ಮೇಕೆದಾಟು ಯೋಜನೆ ಕುರಿತು ಸ್ಟಾಲಿನ್ ಪತ್ರದ ಕುರಿತು ಪ್ರತಿಕ್ರಿಯಿಸಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾವೇರಿ ನೀರು ನಿರ್ವಹಣೆಗೆ ಸಂಬಂಧಿಸಿದ ಸಭೆಯಲ್ಲಿ ಈ ಕುರಿತು ಚರ್ಚೆ ಆಗಬಾರದು ಎಂದು ಅವರು ಬರೆದಿರುವುದೇ ಕಾನೂನು ಬಾಹಿರ ಎಂದು ವಿಶ್ಲೇಷಿಸಿದರು. ಕಾವೇರಿ ನದಿಯಲ್ಲಿ ಇನ್ನೂ 4.5 ಟಿಎಂಸಿ ನೀರು ಬಳಕೆಗೆ ನಮಗೆ ಸ್ಪಷ್ಟ ಅವಕಾಶ ಇದೆ. ಅದಕ್ಕೆ ಡಿಪಿಆರ್ ಮಾಡಿದ್ದೇವೆಯೇ ಹೊರತು ಹೆಚ್ಚುವರಿ ನೀರಿನ ಬಳಕೆಗೆ ನಾವು ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನೆರೆಹೊರೆ ರಾಜ್ಯಗಳ ನೀರಾವರಿ ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿಗೆ ಸರಿಯಲ್ಲ. ಒಕ್ಕೂಟ ವ್ಯವಸ್ಥೆಗೆ ನಾವು ಬೆಲೆ ಕೊಡಬೇಕಾಗುತ್ತದೆ. ಸರ್ಕಾರದ ನಡೆ ಮತ್ತು ನಿಲುವು ಸ್ಪಷ್ಡವಾಗಿದೆ. ನಾವು ಸಲ್ಲಿಸಿದ ಡಿಪಿಆರ್​ಗೆ ಕಾನೂನಾತ್ಮಕ ಅನುಮೋದನೆ ಒದಗಿಸುವ ನಿಟ್ಟಿನಲ್ಲಿ ಚರ್ಚೆ ಆಗಬೇಕಿದೆ. ಪ್ರಧಾನಮಂತ್ರಿಗಳ ಸಭೆ ಜೂನ್ 23ರದು ನಡೆಯಬಹುದು ಎಂದು ಕಾರಜೋಳ ಹೇಳಿದರು.

ನಮ್ಮನ್ನು ದೆಹಲಿಗೆ ಕರೆದೊಯ್ಯಲಿ: ಡಿಕೆಶಿ

ಮೇಕೆದಾಟು ವಿಚಾರವಾಗಿ (Mekedatu Project) ಕರ್ನಾಟಕ ಸರ್ಕಾರದ ನಿಲುವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಖಂಡಿಸಿದ್ದಾರೆ. ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (MK Stalin) ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರವು ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು. ಕೇಂದ್ರ ಸಚಿವರ ಜೊತೆ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ. ಹೀಗಾಗಿ ಸರ್ವಪಕ್ಷ ನಿಯೋಗ ಕರೆದೊಯ್ದರೆ, ಮೇಕೆದಾಟು ಯೋಜನೆ ಬಗ್ಗೆ ನಾವೇ ಮಾತಾಡುತ್ತೇವೆ ಎಂದು ವ್ಯಂಗ್ಯವಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಏನು ಬೇಕಾದರೂ ಪತ್ರ ಬರೆದುಕೊಳ್ಳಲಿ. ಮೇಕೆದಾಟು ನಮ್ಮ ಯೋಜನೆ, ನಮ್ಮ ನೀರು ನಮ್ಮ ಹಕ್ಕು. ಅಗತ್ಯಬಿದ್ದರೆ ಈ ಬಗ್ಗೆ ನಾವು ಕೇಂದ್ರ ಸಚಿವರ ಜೊತೆ ಮಾತನಾಡಲು ಸಿದ್ಧ ಎಂದು ಶಿವಕುಮಾರ್ ತಿಳಿಸಿದರು.

ಪ್ರತಿಭಟನೆ ಹತ್ತಿಕ್ಕುವ ಸರ್ಕಾರದ ನಡೆ ಸರಿಯಲ್ಲ: ಡಿಕೆಶಿ

ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಹತ್ತಿಕ್ಕುವ ವಿಚಾರದಲ್ಲಿ ಬಿಜೆಪಿ ಹೊಸ ಸಂಪ್ರದಾಯ ಹುಟ್ಟುಹಾಕಿದೆ. ಕಾಂಗ್ರೆಸ್ ನಾಯಕ ಶ್ರೀನಿವಾಸ್ ಅವರನ್ನು ಅವರು, ಪ್ರತಿಭಟನೆಗೆ ಹೋಗುತ್ತಿದ್ದಾಗಲೇ ಬಂದಿಸಲು ಮುಂದಾಗಿದ್ದಾರೆ. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಬಿಜೆಪಿ ಸರ್ಕಾರ ವರ್ತಿಸುತ್ತಿರುವ ರೀತಿ ಸರಿ ಅಲ್ಲ. ವಿಚಾರಣೆಗಾಗಿ ನನ್ನನ್ನು ಜಾರಿ ನಿರ್ದೇಶನಾಲಯಕ್ಕೆ ಕರೆದುಕೊಂಡು ಹೋಗಿದ್ದಾಗ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್​ವರೆಗೂ ಜಾಥಾ ಮಾಡಿದ್ದರು. ಆಗ ಯಾರಾದರೂ ಗಲಾಟೆ ಮಾಡಿದ್ದರಾ? ಅವರು ನೋವು, ದುಃಖ, ದುಮ್ಮಾನ ಹೇಳಿಕೊಂಡರು. ದೇಶದ ಉದ್ದಗಲಕ್ಕೂ ನಮ್ಮ ನಾಯಕರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಶ್ರೀನಿವಾಸ್ ಅವರು ಮನೆಯಿಂದ ಹೊರಗೆ ಬರುವ ಮೊದಲೇ ಅವರನ್ನು ಬಂಧಿಸಲು ಹೋಗಿದ್ದರು. ಪ್ರತಿಭಟನೆಗೆ ಹೋಗದಂತೆ ಎಲ್ಲ ವಾಹನಗಳನ್ನು ತಡೆದಿದ್ದರು. ಬೆಳಿಗ್ಗೆ ಎಐಸಿಸಿ ಕಚೇರಿಗೆ ನಮ್ಮ ನಾಯಕರು ಹೋದರೆ ಬಂಧಿಸಿದ್ದಾರೆ. ಇದು ಅನ್ಯಾಯ ಅಲ್ಲವೇ? ಅವರು ಏನು ಅಪರಾಧ ಮಾಡಿದ್ದಾರೆ? ನಮ್ಮ ಕಚೇರಿಗೆ ಹೋದರೆ ಅರೆಸ್ಟ್ ಮಾಡ್ತಾರೆ ಎಂದರೆ ಇದೆಂಥಾ ನೀಚ ರಾಜಕಾರಣ ಎಂದು ಪ್ರಶ್ನಿಸಿದರು. ಈ ವಿಷಯವನ್ನು ಇವರು ತುರ್ತು ಪರಿಸ್ಥಿತಿಗಿಂತಲೂ ದೊಡ್ಡ ವಿಚಾರ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ನೋಟಿಸ್ ನೀಡಿದ್ರೆ ಭಯ ಯಾಕೆ ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ರಾಹುಲ್ ಗಾಂಧಿ ಅವರನ್ನು ಹತ್ತು ಗಂಟೆ ವಿಚಾರಣೆ ಯಾಕೆ ಮಾಡಬೇಕಿತ್ತು? ಚುನಾವಣೆ ಅಫಿಡಿವಿಟ್​ನಲ್ಲಿ ಕೊಟ್ಟಿಲ್ಲವೇ? ನನ್ನನ್ನು ಹತ್ತು ದಿನ ವಿಚಾರಣೆ ಮಾಡಿದ್ದರು. ರೇಡ್ ಆದಾಗ ಬಿಜೆಪಿಯವರದ್ದು ಎಷ್ಟೆಲ್ಲಾ ಹಣ ಸಿಕ್ಕಿತ್ತು. ಆದರೆ ಯಾಕೆ ಯಾವುದೇ ಪ್ರಕರಣ ಇಡಿ ವರೆಗೆ ಹೋಗಿಲ್ಲ. ಇದೇನು ಎಮರ್ಜೆನ್ಸಿನಾ ಅಥವಾ ಪ್ರಜಾಪ್ರಭುತ್ವ ಸರ್ಕಾರನಾ ಎಂದು ಪ್ರಶ್ನಿಸಿದರು.

ಇಂಥ ನೀಚ ರಾಜಕಾರಣವನ್ನು ನಾನು ಎಲ್ಲಿಯೂ ಎಲ್ಲೂ ನೋಡಿಲ್ಲ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾವುದಕ್ಕೂ ಜಗ್ಗಲ್ಲ. ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ ಎಂದರು. ಸಚಿವ ಅಶ್ವತ್ಥ ನಾರಾಯಣ ಮೋಸ್ಟ್ ಕರಪ್ಟೆಡ್ ಮಿನಿಸ್ಟರ್ ಆಫ್ ಕಂಟ್ರಿ ಎಂದು ವಾಗ್ದಾಳಿ ನಡೆಸಿದರು. ವಿಸಿ ಸೆಲೆಕ್ಷನ್ ಮಾಡಲು ಎರಡೆರಡು ಲಕ್ಷ ಕಲೆಕ್ಷನ್ ಮಾಡ್ತಾ ಇದ್ದಾರೆ. ಪಿಎಸ್​ಐ ಹಗರಣ ಹೊರಗೆ ಬಂದಿದ್ದಕ್ಕೆ ಸುಮ್ಮನಾಗಿದ್ದಾರೆ ಎಂದು ದೂರಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada