
ಮಂಗಳೂರು, ಸೆಪ್ಟೆಂಬರ್ 6: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿದ್ದೆ ಎಂದು ಮಾಸ್ಕ್ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ಪ್ರಕರಣದಲ್ಲಿ ಇದೀಗ ಕೇರಳದ ಕಮ್ಯೂನಿಸ್ಟ್ (CPI) ಸಂಸದ ಸಂತೋಷ್ ಕುಮಾರ್ಗೆ (Santosh Kumar) ಸಂಕಷ್ಟ ಎದುರಾಗಿದೆ. ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಕೇರಳದ ಸಂಸದನ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ದೊರೆತಂತಾಗಿದೆ.
ಏತನ್ಮಧ್ಯೆ, ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚೆನ್ನಯ್ಯ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಜಯಂತ್ ಮಾತ್ರ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಕೊಟ್ಟಿದ್ದು ಎಂದಿದ್ದಾರೆ. ಮಟ್ಟಣನವರ್ ನಿರಾಕರಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.
ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ಪೊಲೀಸರು ಈವರೆಗೆ ಒಟ್ಟು 11 ಸೆಕ್ಷನ್ಗಳ ಅಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ನಂಬರ್ 39/2025 ರಲ್ಲಿ BNS 211(A), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.
Published On - 10:38 am, Sat, 6 September 25