AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್: ಧರ್ಮ ಜಾಗೃತಿ ಸಮಾವೇಶದಲ್ಲಿ 8 ಮಹತ್ವದ ನಿರ್ಣಯಗಳನ್ನ ಕೈಗೊಂಡ ಧಾರ್ಮಿಕ ಕ್ಷೇತ್ರಗಳ ಮುಖಂಡರು

ಧರ್ಮಸ್ಥಳ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ರಾಜ್ಯ ಸರ್ಕಾರ ಎಸ್​​ ಐಟಿ ಮೂಲಕ ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಎನ್​ಐಎಗೆ ವಹಿಸುವಂತೆ ಬಲವಾದ ಆಗ್ರಹಗಳು ವ್ಯಕ್ತವಾಗುತ್ತಿವೆ. ಈ ಸಂಬಂಧ ರಾಜ್ಯದ ಎಂಟು ಸ್ವಾಮೀಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇದರ ನಡುವೆ ಇದೀಗ ಧಾರ್ಮಿಕ ಕ್ಷೇತ್ರಗಳ ಮುಖಂಡರು ಸಹ ಧರ್ಮಸ್ಥಳದ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಧರ್ಮಸ್ಥಳ ಕೇಸ್: ಧರ್ಮ ಜಾಗೃತಿ ಸಮಾವೇಶದಲ್ಲಿ 8 ಮಹತ್ವದ ನಿರ್ಣಯಗಳನ್ನ ಕೈಗೊಂಡ ಧಾರ್ಮಿಕ ಕ್ಷೇತ್ರಗಳ ಮುಖಂಡರು
Dharmasthala Case
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Sep 05, 2025 | 7:31 PM

Share

ಮಂಗಳೂರು, (ಸೆಪ್ಟೆಂಬರ್ 05): ಧರ್ಮಸ್ಥಳ ಪ್ರಕರಣ (Dharmasthala case) ಇದೀಗ ದೆಹಲಿ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಕರ್ನಾಟಕದ ಕೆಲ ಸ್ವಾಮೀಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಪ್ರಕರಣವನ್ನು ಎನ್​​ಐಎಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ Who Killed The Women In Dharmastala ಹೀಗೆ ರಾಜ್ಯದ ಕೆಲವು ಮಹಿಳಾ ಸಂಘಟನೆಗಳು ಅಭಿಯಾನ ನಡೆಸುತ್ತಿದ್ದು, ಇದೇ ಕ್ಯಾಂಪೇನ್ ಹೆಸರಿನಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೂ ಪತ್ರ ಬರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಧಾರ್ಮಿಕ ಕ್ಷೇತ್ರಗಳ ಮುಖಂಡರು ಇಂದು (ಸೆಪ್ಟೆಂಬರ್ 05) ಧರ್ಮಸ್ಥಳದಲ್ಲಿ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮ ಜಾಗೃತಿ ಸಮಾವೇಶ ಮಾಡಿದ್ದು, ಈ ವೇಳೆ  ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯಿಸಿದ್ದಾರೆ. ಇನ್ನು ಇದರ ಜೊತೆಗೆ ಸಮಾವೇಶದಲ್ಲಿ ಪ್ರಮುಖವಾಗಿ 8 ನಿರ್ಣಯಗಳನ್ನು ಕೈಗೊಂಡಿದ್ದು, ಅವು ಈ ಕೆಳಗಿನಂತಿವೆ.

ಧರ್ಮ ಜಾಗೃತಿ ಸಮಾವೇಶದಲ್ಲಿ ಕೈಕೊಂಡ 8 ನಿರ್ಣಯಗಳು

  1. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿಗಳಿಗೆ ಮತ್ತು ಕೇಂದ್ರದ ಗೃಹ ಸಚಿವರಿಗೆ ಮನವಿ ನೀಡುವ ನಿರ್ಧಾರ.
  2. ಅಪಪ್ರಚಾರ ಮತ್ತು ಸುಳ್ಳು ಸುದ್ಧಿಯನ್ನು ಹಬ್ಬಿಸಿ ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವ ಯ್ಯೂಟ್ಯೂಬರ್ ಗಳ ವಿರುದ್ಧ ಮತ್ತು ಯ್ಯೂಟ್ಯೂಬ್ ಚ್ಯಾನಲ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹ.
  3. SIT ರಚಿಸಿದಕ್ಕೆ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಲು ನಿರ್ಣಯ.
  4. ಧರ್ಮಸ್ಥಳ ಮತ್ತು ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಸಾಮಾಜಿಕ ಜಾಲತಾಣ ಮೂಲಕ ನಡೆಯುತ್ತಿರುವ ಸುಳ್ಳು ಪ್ರಚಾರಕ್ಕೆ ಖಂಡನೆ‌.
  5. ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡುವ ಹೇಳಿಕೆಯನ್ನು ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಮತ್ತು ಅವರ ಹಿಂದೆ ನಿಂತು ಅವರಿಗೆ ಸಹಕಾರ ನೀಡುತ್ತಿರುವ ವ್ಯಕ್ತಿ,ಸಂಘ ಸಂಸ್ಥೆಗಳ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಈ ಸಭೆಯ ಮೂಲಕ ಒತ್ತಾಯ.
  6. ಶ್ರದ್ದಾ ಕೇಂದ್ರಗಳ ವಿರುದ್ಧ, ಧಾರ್ಮಿಕ ನಂಬಿಕೆಗಳ ವಿರುದ್ಧ ಮತ್ತು ಧಾರ್ಮಿಕ ಮುಖಂಡರ ವಿರುದ್ಧ ವ್ಯವಸ್ಥಿತ ಷಡ್ಯಂತ್ರಗಳು ಮುಂದಿನ ದಿನಗಳಲ್ಲಿ ನಡೆದರೆ ಎಲ್ಲಾ ಧಾರ್ಮಿಕ ಮುಖಂಡರು ಸಂಘಟಿತರಾಗಿ, ಸಮರ್ಥ ಯೋಜನೆಯನ್ನು ರೂಪಿಸಿ, ಅದರ ವಿರುದ್ಧ ಹೋರಾಡಲು ನಿರ್ಣಯ.
  7. ಸಂಘಟನಾ ದೃಷ್ಟಿಯಿಂದ ಈ ಧರ್ಮ ಜಾಗೃತಿ ಸಮಿತಿಯನ್ನು ಇನ್ನಷ್ಟು ಬಲಪಡಿಸಿ ವರ್ಷಕ್ಕೆ ಒಂದು ಬಾರಿಯಾದರೂ ಈ ರೀತಿಯ ಸಮಾವೇಶವನ್ನು ಆಯೋಜಿಸಿ ಸೂಕ್ತ ಕಾರ್ಯಯೋಜನೆಗಳನ್ನು ರೂಪಿಸಲು ನಿರ್ಣಯ.
  8. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರೊಂದಿಗೆ ದೃಢವಾಗಿ ನಿಂತು ಧರ್ಮ ಸಂರಕ್ಷಣೆಯನ್ನು ಮಾಡಲು ಕಟಿಬದ್ಧರಾಗಿರುತ್ತೇವೆ ಎಂಬ ತೀರ್ಮಾನ.