ಮಂಗಳೂರು: ಮಂಗಳೂರಿನ ಪಡೀಲ್ ರೈಲು ನಿಲ್ದಾಣದಿಂದ (Padil Railway Station) ಕಬಕ ಪುತ್ತೂರು (Kabaka Puttur) ರೈಲ್ವೆ ನಿಲ್ದಾಣದ ವರೆಗಿನ ರೈಲು ಮಾರ್ಗದ ವಿದ್ಯುದೀಕರಣ (Electrification) ಕಾಮಗಾರಿ ಪೂರ್ಣಗೊಂಡಿದ್ದು, ಎಲೆಕ್ಟ್ರಿಕಲ್ ರೈಲ್ ಇಂಜಿನ್ನ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ಕಬಕ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ (48 ಕಿಮೀ) ವಿದ್ಯುದ್ದೀಕರಣದ ಕಾಮಗಾರಿಯೂ ಭರದಿಂದ ಸಾಗುತ್ತಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಬೆಂಗಳೂರು ಮತ್ತು ಮಂಗಳೂರು ನಡುವಣ ಸಂಪರ್ಕದ ಪ್ರಮುಖ ರೈಲು ಮಾರ್ಗ ಇದಾಗಿದೆ.
ಎಲೆಕ್ಟ್ರಿಕಲ್ ರೈಲ್ ಇಂಜಿನ್ ಶುಕ್ರವಾರ ಪ್ರಾಯೋಗಿಕ ಸಂಚಾರ ನಡೆಸಿದೆ. ಪಡೀಲ್ನಿಂದ ಮಧ್ಯಾಹ್ನ 2.30ಕ್ಕೆ ಹೊರಟ ಎಲೆಕ್ಟ್ರಿಕಲ್ ರೈಲ್ ಇಂಜಿನ್ ಸಂಜೆ 4 ಗಂಟೆಗೆ ಕಬಕ ಪುತ್ತೂರು ತಲುಪಿತ್ತು. ನೈಋತ್ಯ ರೈಲ್ವೆಯ ಮುಖ್ಯ ಎಂಜಿನಿಯರ್ ಜೈಪಾಲ್ ಸಿಂಗ್ ಪ್ರಾಯೋಗಿಕ ಸಮಚಾರಕ್ಕೆ ಚಾಲನೆ ನೀಡಿದ್ದರು.
ಶೀಘ್ರದಲ್ಲೇ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಟ್ರ್ಯಾಕ್‌ನ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಕಾಮಗಾರಿ ಅಕ್ಟೋಬರ್ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಾಸನ ಮತ್ತು ಸುಬ್ರಹ್ಮಣ್ಯ ರಸ್ತೆ ವಿದ್ಯುದ್ದೀಕರಣಕ್ಕೆ ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?
ಮಂಗಳೂರು ಹಾಗೂ ಪುತ್ತೂರು ನಡುವಣ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ 2022ರ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಿತ್ತು. ಹಾಸನ ಮತ್ತು ಸುಬ್ರಹ್ಮಣ್ಯ ಮಾರ್ಗದ ವಿದ್ಯುದೀಕರಣಕ್ಕೆ ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
2021 ರ ಜುಲೈನಲ್ಲಿ, ಮೈಸೂರು – ಹಾಸನ – ಮಂಗಳೂರು (300 ಕಿಮೀ) ರೈಲು ಮಾರ್ಗದ ವಿದ್ಯುದೀಕರಣದ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ 47 ಕಿಮೀ ದೂರದ ಅರಸೀಕೆರೆ – ಹಾಸನ ಮಾರ್ಗ ಕೂಡ ಸೇರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 31 July 23