ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಅದ್ಧೂರಿ ತೆರೆ, ದೂರದ ಊರುಗಳಿಂದ ಆಗಮಿಸಿ ಮಂಜುನಾಥನ ದರ್ಶನ ಪಡೆದು ಧನ್ಯರಾದ ಭಕ್ತರು

| Updated By: ಆಯೇಷಾ ಬಾನು

Updated on: Dec 04, 2021 | 5:03 PM

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರೋ ಧರ್ಮಸ್ಥಳ ಕ್ಷೇತ್ರ ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ. ಇಂತಹ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಇಂದು ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಅದ್ಧೂರಿ ತೆರೆ, ದೂರದ ಊರುಗಳಿಂದ ಆಗಮಿಸಿ ಮಂಜುನಾಥನ ದರ್ಶನ ಪಡೆದು ಧನ್ಯರಾದ ಭಕ್ತರು
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಅದ್ಧೂರಿ ತೆರೆ
Follow us on

ಮಂಗಳೂರು: ಕಳೆದ ಐದು ದಿನಗಳಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮದ ವೈಭವ ಮೇಳೈಸಿದೆ. ಇಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ಲಕ್ಷಾಂತರ ಭಕ್ತರು ದೀಪೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಮಂಜುನಾಥನ ಸನ್ನಿಧಿಗೆ ಆಗಮಿಸಿದ್ರು. ಗರ್ಭಗುಡಿಯಿಂದ ಹೊರಬರೋ ಮಂಜುನಾಥ ಸ್ವಾಮಿ ಬೆಳ್ಳಿ ರಥದಲ್ಲಿ ಕ್ಷೇತ್ರ ಸುತ್ತೋದನ್ನ ಕಂಡು ಧನ್ಯರಾಗಿದ್ದಾರೆ.

2500 ಕಲಾವಿಧರ ಸಮಾಗಮ
ಶ್ರೀಕ್ಷೇತ್ರ ಧರ್ಮಸ್ಥಳ. ಈ ಹೆಸರು ಕೇಳಿದ್ರೆ ಸಾಕು ಕೋಟ್ಯಾಂತರ ಭಕ್ತ ಸಮುದಾಯದ ಕಿವಿ ನೆಟ್ಟಗಾಗುತ್ತೆ. ಶ್ರೀ ಮಂಜುನಾಥ ಸ್ವಾಮಿ ಅಂದ್ರೆ ಭಕ್ತಿಯಿಂಧ ಕೈಮುಗಿದು ಆರಾಧಿಸೋಕೆ ಅಂತಾನೆ ಕೋಟ್ಯಾಂತರ ಜನ್ರು ಧರ್ಮಸ್ಥಳಕ್ಕೆ ಭೇಟಿ ಕೊಡ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರೋ ಧರ್ಮಸ್ಥಳ ಕ್ಷೇತ್ರ ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ. ಇಂತಹ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಇಂದು ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ. ಒಟ್ಟು 5 ದಿನಗಳ ಕಾಲ ನಡೆಯೋ ಈ ದೀಪೋತ್ಸವ ಸಂಭ್ರಮಕ್ಕೆ ಕೊನೆಯ ದಿನವಾದ ಇಂದು ಲಕ್ಷಾಂತರ ಭಕ್ತರು ಸಾಕ್ಷಿಯಾದ್ರು. ಕೊನೆಯ ದಿನವಾದ ಇಂದು ಶ್ರೀಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ನಡೆಯತು. ಹೂ ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿ ರಥ ದೇವಸ್ಥಾನದ ಮುಂಭಾಗದಿಂದ ಹೊರಟು, ನೆರದಿದ್ದ ಲಕ್ಷ, ಲಕ್ಷ ಭಕ್ತರ ನಡುವೆ, ರಥಬೀದಿಯಾಗಿ ಗೌರಿಮಾರುಕಟ್ಟೆಗೆ ಸಾಗಿತು. ಉತ್ಸವದುದ್ದಕ್ಕೂ ನಾದ ಸ್ವರಗಳು, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆಯರು, ಬ್ಯಾಂಡ ಸೆಟ್ಟುಗಳು ಸಾಥ್ ನೀಡಿದವು. ಆ ಮೂಲಕ ಇಡೀ ಧರ್ಮಸ್ಥಳವೇ ಭಕ್ತಿ ಬಾವದಲ್ಲಿ ಲೀನಾವಾಗುವಂತೆ ಮಾಡಿದವು. ಮುಖ್ಯದ್ವಾರದ ಎಡಬದಿಯ ಗೌರಿಮಾರುಕಟ್ಟೆಗೆ ತಲುಪಿದ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ವಿಧ ವಿಧದ ದೀಪಗಳಿಂದ ಮಂಗಳಾರತಿ ನೇರವೇರಿಸಿ ಪೂಜಾ, ವಿಧ ವಿಧಾನಗಳನ್ನು ಪೂರೈಸಲಾಯಿತು. ಕಾರ್ತಿಕ ಮಾಸದ ಈ ವಿಶೇಷ ಲಕ್ಷದೀಪ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದ್ರು. ಇನ್ನು ಈ ಬಾರಿ 2500 ಜನರ ಕಲಾವಿದರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ರು.

ಐದು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಇಂದು ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ

ಡಾ.ಹೆಗ್ಗಡೆ ಸಾರಥ್ಯದಲ್ಲಿ ನಡೆದ ಲಕ್ಷದೀಪೋತ್ಸವ
ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಹಾಗೂ ಅವರ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ನಡೆದ ಅಂತಿಮ ದಿನದ ಸಮವಸರಣ ಪೂಜೆಗೆ ನೂರಾರು ಭಕ್ತರು ಸಾಕ್ಷಿಯಾದರು. ಮದ್ಯರಾತ್ರಿ 2 ಗಂಟೆಗೆ ಆರಂಭವಾದ ರಥೋತ್ಸವ ಮುಂಜಾನೆ 6.30 ಕ್ಕೆ ಸ್ವಸ್ಥಾನ ಸೇರಿತು. ಇನ್ನು ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನ ಆಕರ್ಷಿಸುತ್ತಿದೆ. ಹೀಗಾಗಿ ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇರೋ ಕಾರಣದಿಂದ ನಿರಂತರ ಅನ್ನ ಸಂತರ್ಪಣೆಯು ನಡೆದಿದೆ. ಇನ್ನು ಕ್ಷೇತ್ರದಲ್ಲಿ ಮಂಜುನಾಥನ ದರ್ಶನ ಪಡೆಯೋ ಭಕ್ತರು ಇಲ್ಲಿನ ವೈಭವವನ್ನ ಕಣ್ತುಂಬಿಕೊಳ್ಳೋ ಮೂಲಕ ಖುಷಿ ಪಟಿದ್ದಾರೆ.

ದೂರದ ಊರಿನಿಂದಲೂ ಸಾವಿರಾರು ಜನ್ರು ಕ್ಷೇತ್ರಕ್ಕೆ ಆಗಮಿಸಿದ್ದು, ಪೊಲೀಸರ ಜೊತೆ ಕ್ಷೇತ್ರದ ಸಿಬ್ಬಂದಿಯೂ ಭದ್ರತೆ ಕೆಲಸದಲ್ಲಿ ತೊಡಗಿದ್ರು. ಈ ಎಲ್ಲಾ ಅಚ್ಚುಕಟ್ಟಾದ ವ್ಯವಸ್ತೆ ಭಕ್ತರಲ್ಲಿ ಖುಷಿ ತಂದಿದ್ದು, ಹೊರ ಜಿಲ್ಲೆಯಷ್ಟೇ ಅಲ್ಲದೇ ಬೇರೆ ರಾಜ್ಯಗಳ ಭಕ್ತರು ಕೂಡ ಆಗಮಿಸಿ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾದ್ರು. ಅಲ್ಲದೇ ಒಂಧಷ್ಟು ಭಕ್ತರು ಲಕ್ಷ ದೀಪ ಸಂಭ್ರಮದ ಮಾಹಿತಿಯೇ ಇಲ್ಲದೇ ಆಗಮಿಸಿದ್ದರೂ ಧರ್ಮಸ್ಥಳದಲ್ಲಿ ಜನಸಾಗರವನ್ನ ಕಂಡು ಅಚ್ಚರಿ ವ್ಯಕ್ತಪಡಿಸೋದ್ರ ಜೊತೆಗೆ ಹಬ್ಬದ ಸಂಭ್ರದ ಕಂಡು ಖುಷಿ ಪಟ್ರು. ಇನ್ನು 5 ದಿನಗಳಿಂದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರತಿನಿತ್ಯ ದೇಸಿಯ ಸಾಂಸ್ಕೃತಿಕ ರಸದೌತಣವೇ ಏರ್ಪಟ್ಟಿದ್ದು ಇಂದು ಸಂಜೆ ಕೂಡ ಅದು ಮುಂದುವರೆಯಲಿದೆ. ನವದುರ್ಗೆಯರ ನೃತ್ಯ ರೂಪಕ, ಭರತನಾಟ್ಯ ಸೇರಿದಂತೆ ವಿವಿಧ ಬಗೆಯ ನಾಟ್ಯ ಪ್ರದರ್ಶನ ಮತ್ತು ನಾಟಕವನ್ನು ಪ್ರದರ್ಶನ ಮಾಡಲಾಯ್ತು. ಇದು ಬಂದವರೆಲ್ಲಾರಿಗೆ ಸಕತ್ ಮನೋರಂಜನೆ ನೀಡಿತು.

ಲಕ್ಷದೀಪೋತ್ಸವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿದ್ದಗೊಳ್ಳುತ್ತಿರುವ ಕಲಾವಿದರು

ಇಂದು ಚಂದ್ರನಾಥಸ್ವಾಮಿ ಮಸವಸರಣ
ಇಂದು ಸಂಜೆ ಚಂದ್ರನಾಥಸ್ವಾಮಿಯ ಮಸವಸರಣ ಪೂಜಾ ಕಾರ್ಮಯಕ್ರಮ ನಡೆಯಲಿದೆ. ಅದ್ದೂರಿಯಾಗಿ ವೈಭವದಿಂದ ನಡೆದ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರ ಸಮೂಹ ಹರಿದು ಬಂದಿತ್ತು. ಇನ್ನು ಇಷ್ಟೊಂದು ಭಕ್ತ ಸಮೂಹ ತುಂಬಿದ್ರೂ ಇಲ್ಲಿ ಒಂದಷ್ಟೂ ಗೊಂದಲ ಮೂಡಿಲ್ಲ. ಎಲ್ಲರೂ ಸಾವಕಾಶವಾಗಿಯೇ ಮಂಜುನಾಥನ ದರ್ಶನ ಪಡೆದು ಧನ್ಯರಾಗಿದ್ದಾರೆ.

ಲಕ್ಷ ದೀಪೋತ್ಸವ ಹಿನ್ನಲೆ ಸಿಂಗಾರಗೊಂಡ ಶ್ರೀಕ್ಷೇತ್ರ
ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಧರ್ಮಸ್ಥಳದ ದೇವಸ್ಥಾನ, ಬೀಡು, ವಸತಿ ಭವನಗಳು, ಉದ್ಯಾನ, ಪ್ರವೇಶ ದ್ವಾರ, ಬಾಹುಬಲಿ ಬೆಟ್ಟವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನಡೆದವು. ಈ ಬಾರಿ ಕೂಡ ಕೊರೊನಾ ಹಿನ್ನೆಲೆಯಲ್ಲಿ ಯುಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಯ್ತು. ಈ ಬಾರಿ ವಸ್ತುಪ್ರದರ್ಶನ ರದ್ದುಗೊಳಿಸಲಾಗಿದೆ. ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ಸಚಿವ ಡಾ.ಸುಧಾಕರ್ ಉದ್ಘಾಟಿಸಿದ್ರು. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಈ ಬಾರಿ ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್ ವಹಿಸಿದ್ರು. ಉಪನ್ಯಾಸಕರಾಗಿ ಡಾ.ಗಜಾನನ ಶರ್ಮ, ಡಾ.ಪಿ.ಚಂದ್ರಿಕಾ, ಡಾ.ಕೆ.ಪಿ.ಪುತ್ತೂರಾಯ ಪ್ರವಚನ ನೀಡಿದ್ರು. ಇನ್ನು ಈ ಬಾರಿಯ ಸರ್ವ ಧರ್ಮ ಸಮ್ಮೇಳನನವನ್ನು ರಾಜ್ಯಪಾಲರಾದ ಥಾವರ್ ಚಾಂದ್ ಗೆಹ್ಲೋಟ್ ಉಧ್ಘಾಟಿಸಿದ್ರು. ಪ್ರೋ.ರಾಮಚಂದ್ರ ಜಿ.ಭಟ್ಟ ಅಧ್ಯಕ್ಷತೆ ವಹಿಸಿದ್ರು. ಡಾ.ಸರ್ಫಾಜ್ ಚಂದ್ರಗತ್ತಿ, ಡಾ.ಎಂ.ಎಸ್.ಪದ್ಮ, ಫಾದರ್ ವೀರೇಶ್ ವಿ.ಮೋರಸ್ ಉಪನ್ಯಾಸ ನೀಡಿದ್ರು.

ಲಕ್ಷದೀಪೋತ್ಸವ ಇತಿಹಾಸ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಮಾರು 8೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ. ಈ ಪ್ರಾಂತದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ-ಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ 4 ಮಂದಿ ಅತಿಥಿಗಳು ಬಂದರು. ನೇಮನಿಷ್ಠೆಯಿದ ದಂಪತಿ ಅಥಿತಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟುಕೊಟ್ಟರು. ಕಾಳರಾಹು, ಕಾಳಕಾಯ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪೆರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

ಧರ್ಮದೇವತೆಗಳೂ ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತ. ಅಂದಿನಿಂದ ಇಲ್ಲಿ ಧರ್ಮ ನೆಲೆ ನಿಂತಿದ್ದಾರೆ. ತಾವೂ ಮಂಜುನಾಥನ ಪೂಜಿಸುತ್ತಾ, ಧರ್ಮರಕ್ಷಣೆಗೆ ತೊಡಗಿದ್ದಾರೆ. ಇಂದೂ ಇಲ್ಲಿ ಧರ್ಮಕಾರ್ಯಗಳು ನಿರಂತರವಾಗಿ ಯಾವ ವಿಘ್ನವೂ ಇಲ್ಲದೆ ಜರುಗುತ್ತವೆ. ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ಸರ್ವಧರ್ಮ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳೂ ನಡೆಯುತ್ತವೆ. 1933ರಿಂದ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಾ ಬಂದಿದೆ. ಸುಮಾರು 6೦ ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಕಾರಿಗಳಾದ ಮಂಜಯ್ಯ ಹೆಗಡೆ ಅವರದ್ದು. ಹಾಗೂ ವೀರೇಂದ್ರ ಹೆಗ್ಗಡೆ ಅವರು ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಲಕ್ಷದೀಪೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಪಾದೆಯಾತ್ರೆಯ ಮೂಲಕ ಬಂದು ಸೇವೆ ಮಾಡಿದ್ರು. ಅಲ್ಲದೆ ರೈತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಧಾನ್ಯಗಳನ್ನು ಕಾಣಿಕೆಯಾಗಿ ತಂದು ಒಪ್ಪಿಸಿದ್ರು. ಬೆಂಗಳೂರಿನ ವ್ಯಾಪಾರಿಗಳು ವಿವಿಧ ಹೂಗಳಿಂದ ಕ್ಷೇತ್ರವನ್ನು ಅಲಂಕರಿಸು ಮೂಲಕ ಸೇವೆ ಸಲ್ಲಿಸಿದ್ರು.

ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

ಇದನ್ನೂ ಓದಿ: ಐದು ದಿನಗಳ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂಪನ್ನ, ಇಲ್ಲಿದೆ ನೀವು ಕಣ್ತುಂಬಿಕೊಳ್ಳಬೇಕಾದ ಕಲರ್ ಫುಲ್ ಫೋಟೋಗಳು