ಮಂಗಳೂರು: ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನ ಮಾರ್ಗನ್ಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ ನೇಣು ಹಾಕಿಕೊಂಡು ಮೃತಪಟ್ಟಿದ್ದರೆ, ಹೆಂಡತಿ ಮತ್ತು ಮಕ್ಕಳಿಗೆ ವಿಷ ಕೊಟ್ಟು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ನಾಗೇಶ್ ಸದೇರಿಗುಪ್ಪೆ(30), ವಿಜಯಲಕ್ಷಿ(26), ಸಪ್ನ(8) ಮತ್ತು ಸಮಂತ್(4) ಮೃತರು. ಇವರುಗಳು ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರು. ನಾಗೇಶ್ ಡ್ರೈವರ್ ಆಗಿ, ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ನಾಲ್ವರ ಆತ್ಮಹತ್ಯೆಗೆ ಮತಾಂತರ ಕಾರಣ?
ಮಂಗಳೂರಿನ ಮಾರ್ಗನ್ಸ್ ರಸ್ತೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರ ಕಾರಣ ಎನ್ನಲಾಗಿದೆ. ಈ ಕುರಿತು ಖುದ್ದು ಮನೆಯ ಯಜಮಾನ ಡೆತ್ ನೋಟ್ ಬರೆದಿಟ್ಟು, ವಿಷಯವನ್ನು (religion conversion) ಪ್ರಸ್ತಾಪಿಸಿದ್ದಾರೆ. ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ವರ ಸಾವಿಗೆ ಮತಾಂತರ ಕಾರಣವೆಂದು ಮನೆ ಯಜಮಾನ, ಮೃತ ನಾಗೇಶ್ ಉಲ್ಲೇಖಿಸಿದ್ದಾರೆ. ಮಹಿಳೆಯ ಹೆಸರನ್ನು ಉಲ್ಲೇಖಿಸಿ, ಆಕೆಯೇ ನಮ್ಮ ಸಾವಿಗೆ ಕಾರಣ. ನನ್ನ ಪತ್ನಿಯನ್ನು ತನ್ನ ಧರ್ಮಕ್ಕೆ ಮತಾಂತರ ಮಾಡಿದ್ದಳು. ಹೀಗಾಗಿ ವಿಜಯಲಕ್ಷ್ಮಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಾಗೇಶ್ ಡೆತ್ ನೋಟ್ (death note) ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಕಂಟೆಂಟ್ ಟಿವಿ9 ಗೆ ಲಭ್ಯವಾಗಿದೆ. ಇದೀಗ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ:
ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಡಿಆರ್ ಕಚೇರಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಗುರುಪ್ರಸಾದ್ ನಾಯ್ಕ್ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಕಾಲು ಜಾರಿ ಬಾವಿಯಲ್ಲಿ ಬಿದ್ದು ಯುವಕನ ಸಾವು
ವಿಜಯಪುರ: ಯುವಕನೊಬ್ಬ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ಕೊಲ್ಹಾರ ತಾಲೂಕಿನ ಮುತ್ತಗಿ ಗ್ರಾಮದ ಮಂಜುನಾಥ ಬಸಪ್ಪ ಪೂಜಾರಿ (24) ಮೃತ ದುರ್ದೈವಿ. ಮುತ್ತಗಿ ಬಳಿಯ ತೋಟದಲ್ಲಿ ಇಂದು ಬೆಳಗ್ಗೆ ಬಾವಿಯಿಂದ ಬೆಳೆಗಳಿಗೆ ನೀರು ಬಿಡಲು ತೆರಳಿದ್ದ ವೇಳೆ ಅವಘಡ ನಡೆದಿದೆ.
ನಾಯಿ ವಿಚಾರಕ್ಕೆ ಕಿರಿಕ್, ಬೆಂಗಳೂರಿನ ವ್ಯಕ್ತಿಯ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ ಯುವಕ!
ರಾಮನಗರ: ನಾಯಿಯ ವಿಚಾರಕ್ಕೆ ಕಿರಿಕ್ ಮಾಡಿಕೊಂಡ ಬಿಸಿರಕ್ತದ ಯುವಕನೊಬ್ಬ ನೇರವಾಗಿ ವ್ಯಕ್ತಿಯೊಬ್ಬರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಅದೃಷ್ಟವಷಾತ್ ಸ್ವಲ್ಪದರಲ್ಲೇ ಆ ವ್ಯಕ್ತಿ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ! ಇದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಪನಿಗೌಡನದೊಡ್ಡಿ ಗ್ರಾಮದಲ್ಲಿ ನಡೆದಿರುವ ಘಟನೆ. ಪ್ರದೀಪ್ ಎಂಬ ವ್ಯಕ್ತಿಯ ಮೇಲೆ ಗ್ರಾಮದ ಕಾರ್ತಿಕ್(24) ಎಂಬ ಯುವಕನಿಂದ ಈ ಕುಕೃತ್ಯ ನಡೆದಿದೆ.
ಪ್ರದೀಪ್ ಎಂಬುವವರ ನಾಯಿಗೆ ಕಾರು ಗುದ್ದಿದ್ದೇ ಇದಕ್ಕೆ ಹೇತುವಾಗಿದೆ. ಬೆಂಗಳೂರು ಮೂಲದ ವ್ಯಕ್ತಿ ಕಾರಿನಲ್ಲಿ ಹೋಗುತ್ತಿದ್ದಾಗ ನಾಯಿಗೆ ಡಿಕ್ಕಿ ಹೊಡೆಸಿದ್ದಾನೆ. ಈ ವಿಚಾರವಾಗಿ ಬೆಂಗಳೂರು ಮೂಲದ ವ್ಯಕ್ತಿಗೆ ಪ್ರದೀಪ್ ಸಿಡಿಗುಂಡಿನಂತೆ ಆವಾಜ್ ಹಾಕಿದ್ದಾನೆ. ಆಕ್ರಮವಾಗಿ ಖರೀದಿಸಿದ ಬಂದೂಕಿನಿಂದ ಕಾರ್ತಿಕ್ ಗುಂಡು ಹಾರಿಸಿದ್ದಾನೆ. ಕಾರ್ಯಾಚರಣೆಗೆ ಇಳಿದ ಸಾತನೂರು ಠಾಣೆ ಪೊಲೀಸರು ತಕ್ಷಣ ಕಾರ್ತಿಕ್ನನ್ನು ಬಂಧನಕ್ಕೊಳಪಡಿಸಿದ್ದಾರೆ. ಆತನ ಬಳಿಯಿದ್ದ ಆಕ್ರಮ ಬಂದೂಕನ್ನೂ ವಶಪಡಿಸಿಕೊಂಡಿದ್ದಾರೆ. ಕಾರ್ತಿಕ್ ಜೊತೆ ಇದ್ದ ಮತ್ತೊಬ್ಬ ಪರಮೇಶ್ ಎಂಬಾತ ಸದ್ಯಕ್ಕೆ ಪರಾರಿಯಾಗಿದ್ದಾನೆ.
Published On - 12:03 pm, Wed, 8 December 21