ನಮ್ಮನ್ನೂ ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಆಫ್ಘನ್ನರು ಕೇಳುತ್ತಿದ್ದರು: ಭಾರತಕ್ಕೆ ವಾಪಸಾದ ಕನ್ನಡಿಗರ ಮಾತು

Afghanistan: ಮಂಗಳೂರಿನ ಬಜ್ಪೆಯ ದಿನೇಶ್ ರೈ, ಉರ್ವ ಶ್ರವಣ್ ಅಂಚನ್, ಮೂಡಬಿದ್ರೆಯ ಜಗದೀಶ್ ಪೂಜಾರಿ ಹಾಗೂ ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್​ ಡಿಸೋಜಾ ವಾಪಸ್​ ಆಗಿದ್ದಾರೆ.

ನಮ್ಮನ್ನೂ ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಆಫ್ಘನ್ನರು ಕೇಳುತ್ತಿದ್ದರು: ಭಾರತಕ್ಕೆ ವಾಪಸಾದ ಕನ್ನಡಿಗರ ಮಾತು
ಸಾಂಕೇತಿಕ ಚಿತ್ರ
Updated By: ganapathi bhat

Updated on: Aug 23, 2021 | 10:49 PM

ಮಂಗಳೂರು: ಅಫ್ಘಾನಿಸ್ತಾನದಲ್ಲಿ ಇದ್ದ ನಾಲ್ಕು ಮಂದಿ ಕನ್ನಡಿಗರು ಇಂದು (ಆಗಸ್ಟ್ 23) ಮಂಗಳೂರಿಗೆ ಆಗಮಿಸಿದ್ದಾರೆ. ಕಾಬೂಲ್​ನಿಂದ ನಿನ್ನೆ ದೆಹಲಿಗೆ ಬಂದಿದ್ದ ಕನ್ನಡಿಗರು, ಇಂದು ದೆಹಲಿಯಿಂದ ಮುಂಬೈಗೆ ಬಂದು ಬಳಿಕ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನ ಬಜ್ಪೆಯ ದಿನೇಶ್ ರೈ, ಉರ್ವ ಶ್ರವಣ್ ಅಂಚನ್, ಮೂಡಬಿದ್ರೆಯ ಜಗದೀಶ್ ಪೂಜಾರಿ ಹಾಗೂ ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್​ ಡಿಸೋಜಾ ವಾಪಸ್​ ಆಗಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಬಂದಿಳಿದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಮಗೆ ಯಾವುದೇ ತೊಂದರೆ ಆಗಲಿಲ್ಲ. ಸೇನಾ ನೆಲೆಯಲ್ಲಿ 48 ದೇಶಗಳ ಯೋಧರು ಇದ್ದರು. ನಿಮಗೆ ಏನೂ ಆಗಲ್ಲವೆಂದು ಯೋಧರು ಧೈರ್ಯ ಹೇಳಿದ್ರು. ಹಾಗಾಗಿ ಯಾವುದೇ ತೊಂದರೆ ಆಗಲಿಲ್ಲ. ಆಫ್ಘನ್ ಪ್ರಜೆಗಳು ಏರ್‌ಪೋರ್ಟ್‌ಗೆ ನುಗ್ಗಿದಾಗ ಫೈರಿಂಗ್ ಮಾಡಲಾಗಿತ್ತು. ಏರ್‌ಪೋರ್ಟ್‌ನಲ್ಲಿ ಇಬ್ಬರಿಗೆ ಶೂಟ್ ಮಾಡಲಾಯಿತು. ಇನ್ನು ಮುಂದೆ ನಾನು ಭಾರತದಲ್ಲಿಯೇ ಕೆಲಸ ಮಾಡುತ್ತೇನೆ. ಕೆಲಸಕ್ಕಾಗಿ ನಾನು ಬೇರೆ ದೇಶಕ್ಕೆ ಹೋಗಲ್ಲ ಎಂದು ಟಿವಿ9ಗೆ ಡೆಸ್ಮಂಡ್ ಡೇವಿಸ್​ ಡಿಸೋಜಾ ಪ್ರತಿಕ್ರಿಯೆ ನೀಡಿದ್ದಾರೆ.

ಆಗಸ್ಟ್ 11 ರಂದು ನಾನು ಅಫ್ಘಾನಿಸ್ತಾನಕ್ಕೆ ಹೋಗಿದ್ದೆ. ಈಗ ನೋಡಿದ್ರೆ ವಾಪಸ್ ಬರಬೇಕಾದ ಪರಿಸ್ಥಿತಿ ಬಂತು. ನಮ್ಮ ಜತೆ ಮಹಿಳೆಯರು ಯಾರೂ ಕೆಲಸ ಮಾಡುತ್ತಿರಲಿಲ್ಲ. ನಾವಿದ್ದ ಸ್ಥಳದಲ್ಲಿ ಮಹಿಳೆಯರಿಗೆ ತೊಂದರೆ ಕೊಟ್ಟಿಲ್ಲ. ಆದರೆ, ಅಫ್ಘಾನಿಸ್ತಾನದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಆಫ್ಘನ್‌ನಿಂದ ವಾಪಸಾದ ಜಗದೀಶ್ ಪೂಜಾರಿ ಹೇಳಿಕೆ ನೀಡಿದ್ದಾರೆ.

ನಮ್ಮ ಜತೆ ಕೆಲಸ ಮಾಡ್ತಿದ್ದ ಆಫ್ಘನ್ನರ ಸ್ಥಿತಿ ಅಯೋಮಯ ಆಗಿದೆ. ಅವರು ಭಾರತಕ್ಕೆ ಕರೆದುಕೊಂಡು ಹೋಗಲು ಬೇಡಿಕೊಳ್ಳುತ್ತಿದ್ದರು. ನಮ್ಮ ಜತೆ ಕೆಲಸ ಮಾಡುತ್ತಿದ್ದ ಆಫ್ಘನ್ನರು ಹಾಗೆ ಕೇಳಿಕೊಳ್ಳುತ್ತಿದ್ದರು. ನಾವು ಸೇನಾ ನೆಲೆಯಲ್ಲಿ ಸುರಕ್ಷಿತವಾಗಿದ್ದೆವು. ಹೊರಗೆ ಏನಾಗ್ತಿತ್ತು ಎಂಬುದು ನಮಗೆ ಗೊತ್ತಾಗುತ್ತಿರಲಿಲ್ಲ ಎಂದು ಟಿವಿ9ಗೆ ಮಂಗಳೂರಿನ ಬಜ್ಪೆಯ ದಿನೇಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ. ಅಫ್ಘಾನಿಸ್ತಾನದಿಂದ ವಾಪಸಾಗಿ ಮಾಧ್ಯಮದ ಜೊತೆ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

ಆ. 31ರೊಳಗೆ ಅಫ್ಘಾನ್​ನಿಂದ ಸೇನೆ ಹಿಂಪಡೆಯದಿದ್ದರೆ ಅಪಾಯ ಎದುರಿಸಬೇಕಾದೀತು; ಅಮೆರಿಕಕ್ಕೆ ತಾಲಿಬಾನ್ ಎಚ್ಚರಿಕೆ

Published On - 10:49 pm, Mon, 23 August 21