ಮೊಬೈಲ್ ವಿಚಾರಕ್ಕೆ ಸ್ನೇಹಿತನಿಂದಲೇ ಮರ್ಡರ್, 7ತಿಂಗಳ ನಂತ್ರ ಕೊಲೆ ರಹಸ್ಯ ಬಯಲು
ಇಬ್ಬರ ನಡುವೆ ಗಲಾಟೆ ನಡೆದು ರೈಲ್ವೆ ಗೂಡ್ಸ್ ಶೆಡ್ ನಲ್ಲಿದ್ದ ಕಲ್ಲಿಗೆ ಮೈನುಲ್ ತಲೆಯನ್ನು ಜಜ್ಜಿ ಪ್ರದೀಪ್ ಸಾಯಿಸಿದ್ದಾನೆ. ಈತನನ್ನು ಹುಡುಕಿಕೊಂಡು ಒರಿಸ್ಸಾಗೆ ಹೋದ ಪೊಲೀಸರಿಗೆ ಆರೋಪಿ ಕನ್ಯಾಕುಮಾರಿಯಲ್ಲಿ ತಲೆಮರೆಸಿಕೊಡಿರೋದು ಗೊತ್ತಾಗಿ, ಅಲ್ಲೇ ಬಂಧಿಸಿದ್ದಾರೆ.
ಮಂಗಳೂರು: ಫೆಬ್ರವರಿ18. 2021. ಈ ದಿನದಂದು ಮಂಗಳೂರಿನ ಬಂದರು ಬಳಿಯ ರೈಲ್ವೆ ಗೂಡ್ಸ್ ಶೆಡ್ ಬಳಿ ಒಂದು ಅಪರಿಚಿತ ಶವ ಬಿದ್ದಿತ್ತು. ಬಾಡಿಯಿದ್ದ ಸ್ಥಿತಿ ನೋಡಿದವರು ಇದು ಆತ್ಮಹತ್ಯೆ ಆಗಿರಬಹುದು ಅಥವಾ ಕುಡಿದು ಸತ್ತಿರಬಹುದು ಅಂದ್ಕೊಂಡಿದ್ರು. ಆದ್ರೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗಿಳಿದಿದ್ರು. ಮೊದಲು ಈತ ಯಾರು ಅನ್ನೋದನ್ನ ಪತ್ತೆ ಹಚ್ಚಿದ್ರು. ಕೆಲ ದಿನಗಳ ನಂತರ ಕೊಲೆಯಾದ ವ್ಯಕ್ತಿ ಅಸ್ಸಾಂ ಮೂಲದ ಮೈನುಲ್ ಹಕ್ ಬರ್ಬಯಾ, 42 ವರ್ಷದ ಈತ ಮಂಗಳೂರಿನ ಧಕ್ಕೆಯಲ್ಲಿ 10 ವರ್ಷಗಳಿಂದ ಮೀನುಗಾರಿಕೆ ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ಅನ್ನೋದು ಗೊತ್ತಾಗಿತ್ತು. ಆದ್ರೆ ಈತ ಕೊಲೆಯಾಗಿರೋದು ಈತನ ಮನೆಯವರಿಗೆ ಗೊತ್ತಿರಲಿಲ್ಲ. ಹೀಗಾಗಿ ಈತನ ಮನೆ ಹುಡುಕಿಕೊಂಡು ಅಸ್ಸಾಂಗೆ ಪೊಲೀಸರು ಹೋಗಿ, ಸಿಲ್ಚಾರ್‌ನಲ್ಲಿರೋ ಈತನ ಮನೆಗೆ ವಿಚಾರ ತಿಳಿಸಿದ್ರು. ಅಲ್ಲಿ ಕೂಡ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಬಳಿಕ ಮಂಗಳೂರಿಗೆ ವಾಪಾಸ್ ಬಂದ ಪೊಲೀಸರು ತನಿಖೆ ಮುಂದುವರಿಸಿದ್ರು.
ಕಲ್ಲಿನಿಂದ ಜಜ್ಜಿ ಸ್ನೇಹಿತನಿಂದಲೇ ನಡೆದಿತ್ತು ಕೊಲೆ ಹೇಗಾದ್ರೂ ಮಾಡಿ ಕೊಲೆ ರಹಸ್ಯ ಬಯಲಿಗೆಳೆಯಬೇಕು ಅಂತ ಪಣತೊಟ್ಟಿದ್ದ ಪೊಲೀಸರಿಗೆ ಮೈನುಲ್‌ಗೆ ನಾಲ್ಕು ಜನ ಸ್ನೇಹಿತರು ಇರೋದು ಗೊತ್ತಾಗುತ್ತೆ. ನಾಲ್ಕು ಜನ ಸ್ನೇಹಿತರಲ್ಲಿ ಓರಿಸ್ಸಾ ಮೂಲದ ಪ್ರದೀಪ್ ಲಕಾರ್ ಎಂಬುವನ ಎರಡು ಮೊಬೈಲ್ ಕಳೆದು ಹೋಗಿರುತ್ತದೆ. ಅದರಲ್ಲಿ ಒಂದು ಮೊಬೈಲ್‌ನನ್ನ ವಾಪಾಸ್ ಕೊಡಿಸುತ್ತೇನೆ ಅಂತಾ ಮೈನುಲ್ 500 ರೂಪಾಯಿ ಹಣ ಪಡೆದುಕೊಂಡು ಕಳೆದು ಹೋದ ಮೊಬೈಲ್ ತಂದುಕೊಡುತ್ತಾನೆ. ನಂತ್ರ ಉಳಿದ ಇಬ್ಬರು ಸ್ನೇಹಿತರು ಪ್ರದೀಪ್ ಬಳಿ ಬಂದು ನೀನು ಮಲಗಿದ್ದಾಗ ನಿನ್ನ ಮೊಬೈಲ್ ಕದ್ದಿದ್ದು ಇದೇ ಮೈನುಲ್ ಅಂತಾ ಹೇಳಿದ್ದಾರೆ. ನಂತ್ರ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ರೈಲ್ವೆ ಗೂಡ್ಸ್ ಶೆಡ್ ನಲ್ಲಿದ್ದ ಕಲ್ಲಿಗೆ ಮೈನುಲ್ ತಲೆಯನ್ನು ಜಜ್ಜಿ ಪ್ರದೀಪ್ ಸಾಯಿಸಿದ್ದಾನೆ. ಈತನನ್ನು ಹುಡುಕಿಕೊಂಡು ಒರಿಸ್ಸಾಗೆ ಹೋದ ಪೊಲೀಸರಿಗೆ ಆರೋಪಿ ಕನ್ಯಾಕುಮಾರಿಯಲ್ಲಿ ತಲೆಮರೆಸಿಕೊಡಿರೋದು ಗೊತ್ತಾಗಿ, ಅಲ್ಲೇ ಬಂಧಿಸಿದ್ದಾರೆ. ನಂತರ ಅಲ್ಲಿಗೆ ಹೋಗಿ ಆತನನ್ನು ಬಂಧಿಸಿ ಕರೆತಂದಿದ್ದಾರೆ.
ಒಟ್ನಲ್ಲಿ 7 ತಿಂಗಳ ಹಿಂದೆ ನಡೆದ ಕೊಲೆ ರಹಸ್ಯವನ್ನ ಮಂಗಳೂರಿನ ಪೊಲೀಸರು ಭೇದಿಸಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ಬೇರೆ ರಾಜ್ಯದಿಂದ ಬಂದು ಜೊತೆಯಲ್ಲೇ ಮೀನು ಹಿಡಿದುಕೊಂಡು ಜೀವನ ಸಾಗಿಸುತ್ತಿದ್ದ ಸ್ನೇಹಿತರ ಜೀವನದಲ್ಲಿ ಕಳ್ಳತನದ ಆರೋಪ ಜೀವವನ್ನೇ ತೆಗೆದಿದ್ದು ದುರಂತ.
ಇದನ್ನೂ ಓದಿ: Petrol Price Today: ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!