ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಪತಿ ವಿವಾದ; ಗೊಂದಲ ನಿವಾರಿಸುವಂತೆ ಉಪಕುಲಪತಿಯಿಂದ ಸರ್ಕಾರಕ್ಕೆ ಪತ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2023 | 6:51 PM

ವಿಘ್ನ ವಿನಾಶಕ ಗಣಪತಿಯ ಉತ್ಸವ ಆಚರಣೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಈ ನಡುವೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ವಿವಾದವೊಂದು ಎದ್ದಿದೆ. ಗಣಪನನ್ನು ಕೂರಿಸುವ ಜಾಗ, ಖರ್ಚು ವೆಚ್ಚಕ್ಕೆ ಬಳಸುವ ಹಣ ಯಾವುದು ಎಂಬುದೇ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಪತಿ ವಿವಾದ; ಗೊಂದಲ ನಿವಾರಿಸುವಂತೆ ಉಪಕುಲಪತಿಯಿಂದ ಸರ್ಕಾರಕ್ಕೆ ಪತ್ರ
ಮಂಗಳೂರು
Follow us on

ದಕ್ಷಿಣ ಕನ್ನಡ, ಸೆ.07: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangalore University) ಕಳೆದ 40 ವರ್ಷಗಳಿಂದ ಗಣೇಶೋತ್ಸವ ಆಚರಣೆ (Ganesh Chaturthi) ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚಿನ ಎರಡು ವರ್ಷಗಳಲ್ಲಿ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಲಾಗಿದೆ. ಆದರೆ, ಈ ಬಾರಿ ವಿಶ್ವ ವಿದ್ಯಾಲಯದ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆ ಮಾಡದಂತೆ ವಿವಿ ಉಪಕುಲಪತಿ ಜಯರಾಜ್ ಅಮೀನ್ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಗಣೇಶೋತ್ಸವ ರದ್ದು ಮಾಡದಂತೆ ಶಾಸಕ ಆಗ್ರಹ

ಈ ಹಿಂದಿನಿಂದ ನಡೆದುಕೊಂಡು ಬಂದಂತೆ ಮಂಗಳೂರು ವಿವಿಯ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಿ, ಮಂಗಳಾ ಆಡಿಟೋರಿಯಂನಲ್ಲಿ ಬೇಡ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಗೆ ಸೂಚನೆ ನೀಡಿದ್ದಾರೆ. ಆದರೆ, ವಿವಿ ಉಪಕುಲಪತಿಗಳ ಈ ನಡೆ ಎಬಿವಿಪಿ, ಬಿಜೆಪಿ ಹಾಗೂ ಸಂಘಪರಿವಾರವನ್ನು ಕೆರಳಿಸಿದ್ದು, ವಿವಿ ಆಡಳಿತದ ವಿರುದ್ದ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಮಂಗಳ ಆಡಿಟೋರಿಯಂನಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದಿಂದ ಆಚರಿಸಿಕೊಂಡು ಬರುತ್ತಿದ್ದ ಗಣೇಶೋತ್ಸವವನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಚಾಮರಾಜಪೇಟೆ ಈದ್ಗಾ ಮೈದಾನ ಗಣೇಶೋತ್ಸವ ಆಚರಣೆ ವಿಚಾರ: ಇಂದು ಮೇಲ್ಮನವಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್​

ಶಾಸಕರ ನೇತೃತ್ವದಲ್ಲಿ, ಮಾಜಿ ಸಿಂಡಿಕೇಟ್ ಸದಸ್ಯರು, ಬಿಜೆಪಿ ಮುಖಂಡರು, ಎಬಿವಿಪಿ ನಿಯೋಗ ಕುಲಪತಿ ಜಯರಾಜ್ ಅಮೀನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಿಸಬೇಕು ಇದರ ಜೊತೆ ಇದರ ಖರ್ಚು ವೆಚ್ಚದ ಜವಾಬ್ದಾರಿ ಕೂಡ ವಿಶ್ವವಿದ್ಯಾನಿಲಯ ವಹಿಸುವಂತೆ ಒತ್ತಾಯಿಸಿದೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿವಿ ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ‘ವಿದ್ಯಾರ್ಥಿ ನಿಲಯದಲ್ಲಿ ನಿಲಯಪಾಲಕರ ನೇತ್ರತ್ವದಲ್ಲಿ ಸಾಂಸ್ಕೃತಿಕ ಶುಲ್ಕದ ಉಪಯೋಗ ಮಾಡಿ ಗಣೇಶೋತ್ಸವ ಆಚರಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದ್ರೆ, ವಿಶ್ವವಿದ್ಯಾನಿಲಯ ನೇರವಾಗಿ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ಸಾಧ್ಯವಿಲ್ಲ.

ಇದರ ಜೊತೆ ಕಳೆದ ವರ್ಷದ ಗಣೇಶೋತ್ಸವ ಆಚರಣೆಗೆ ವಿಶ್ವವಿದ್ಯಾನಿಲಯದ ವತಿಯಿಂದ ವ್ಯಯಿಸಿರುವ ಒಂದು ಲಕ್ಷದ ತೊಂಬತ್ತೇಳು ಸಾವಿರ ರೂಗಳಿಗೆ ಅಡಿಟ್ ಅಬ್ಜೆಕ್ಷನ್ ಬಂದಿದ್ದು, ಹೀಗಾಗಿ ವಿಶ್ವವಿದ್ಯಾನಿಲಯದಿಂದ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆ ವಿದ್ಯಾರ್ಥಿಗಳಿಗೆ ರಜೆ ಇರುವುದರಿಂದ 600 ಆಸನಗಳ ವ್ಯವಸ್ಥೆಯಿರುವ ಹವಾನಿಯಂತ್ರಿತ ಆಡಿಟೋರಿಯಂ ಈ ಕಾರ್ಯಕ್ರಮಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದ ಉಪ ಕುಲಪತಿಗಳು

ವಿಶ್ವವಿದ್ಯಾನಿಲಯದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ಎದ್ದಿರುವ ಗೊಂದಲಗಳನ್ನು ಬಗೆಹರಿಸುವಂತೆ ವಿವಿ ಉಪಕುಲಪತಿಗಳು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದಾರೆ. ಈ ನಡುವೆ ಹಾಸ್ಟೆಲ್ ವಾರ್ಡನ್, ಟೀಚಿಂಗ್, ನಾನ್ ಟೀಚಿಂಗ್ ಸ್ಟಾಫ್‌‌ಗಳ ಸಭೆ ನಡೆಸಿ ಮಂಗಳಾ ಆಡಿಟೋರಿಯಂ‌ನಲ್ಲಿಯೇ ಗಣೇಶೋತ್ಸವ ನಡೆಸಬಹುದು. ಆದ್ರೆ, ಇದಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳಿಗೆ ವಿಶ್ವವಿದ್ಯಾನಿಲಯದ ಬದಲು ವಸತಿನಿಲಯಗಳಲ್ಲಿ ಸಂಗ್ರಹಿಸಿರುವ ಸಾಂಸ್ಕೃತಿಕ ಶುಲ್ಕವನ್ನು ಬಳಸಬಹುದು ಎಂದಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ

ಈ ನಡುವೆ ಉಪ ಕುಲಪತಿಗಳನ್ನು ಕಾಂಗ್ರೆಸ್, ಡಿ.ವೈ.ಎಫ್.ಐ, ಹಾಗೂ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ ನ ಪ್ರಮುಖರು ಭೇಟಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬಾರದು. ವಿಶ್ವವಿದ್ಯಾನಿಲಯದಿಂದ ಹಣ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಈ ಹಿಂದಿನಂತೆ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಿ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯಗಳು ಧಾರ್ಮಿಕ ಆಚರಣೆಯ ಕೇಂದ್ರವಾಗಬಾರದು, ವಿದ್ಯಾರ್ಜನೆಯ ಕೇಂದ್ರವಾಗಬೇಕೆಂದು ಸಿ.ಎಂ ಸಿದ್ದರಾಮಯ್ಯ ಈಗಾಗಲೇ ಎಲ್ಲಾ ವಿವಿಯ ಉಪ ಕುಲಪತಿಗಳಿಗೆ ಸೂಚಿಸಿದ್ದಾರೆ. ಸದ್ಯ ಮಂಗಳೂರು ವಿವಿಯಲ್ಲಿ ಗಣಪತಿ ಕೂರಿಸುವ ವಿವಾದ ಜೋರಾಗಿದ್ದು, ಸರ್ಕಾರ ಈ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತೆ, ಆಡಿಟೋರಿಯಂನಲ್ಲಿ ಆಚರಣೆ ನಡೆಯುತ್ತಾ ಅಥವಾ ವಿದ್ಯಾರ್ಥಿ ನಿಲಯದಲ್ಲಿ ಆಗುತ್ತಾ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ