ಮಂಗಳೂರು ಪಾಲಿಕೆ ಬಿಜೆಪಿ ತೆಕ್ಕೆಗೆ, ಸುಧೀರ್ ಶೆಟ್ಟಿ ಮೇಯರ್, ಸುನೀತಾ ಉಪಮೇಯರ್
mangaluru city corporation mayor and deputy mayor Election 2023 ಮಂಗಳೂರು ನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಡೆದಿದ್ದು, ಮೇಯರ್ ಆಗಿ ನಿರೀಕ್ಷೆಯಂತೆ ಬಿಜೆಪಿಯ ಸುಧೀರ್ ಶೆಟ್ಟಿ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಸುನಿತಾ ಆಯ್ಕೆಯಾಗಿದ್ದಾರೆ. ಇನ್ನು ಮೇಯರ್ ಹಾಗೂ ಉಪಮೇಯರ್ಗೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿ ಅಭಿನಂದಿಸಿದರು.
ಮಂಗಳೂರು, (ಸೆಪ್ಟೆಂಬರ್, 08): ಮಂಗಳೂರು ನಗರ ಪಾಲಿಕೆಯ (mangaluru city corporation) 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಡೆದಿದ್ದು, ಮೇಯರ್ ಆಗಿ ನಿರೀಕ್ಷೆಯಂತೆ ಬಿಜೆಪಿಯ ಸುಧೀರ್ ಶೆಟ್ಟಿ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಸುನಿತಾ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯ ಮೇಯರ್ ಆಗಿದ್ದರು. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದ ಸದಸ್ಯ ಸುಧೀರ್ ಶೆಟ್ಟಿ ಅವರಿಗೆ ಮೇಯರ್ ಹುದ್ದೆ ಒಲಿದುಬಂದಿದೆ. ಇನ್ನು ಪರಿಶಿಷ್ಟ ಜಾತಿಯ ಏಕೈಕ ಸದಸ್ಯೆ ಪಣಬೂರು ವಾರ್ಡ್ನ ಸುನೀತಾ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಧೀರ್ ಶೆಟ್ಟಿ ಅವರು ಮೂರನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದು, ಈ ಹಿಂದೆ ಮುಖ್ಯ ಸಚೇತಕರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಕಳೆದ ವರ್ಷ ಮೇಯರ್ ಚುನಾವಣೆ ವೇಳೆ ಸುಧೀರ್ ಅವರ ಹೆಸರು ಕೇಳಿಬಂದಿತ್ತು. ಆದ್ರೆ, ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಲ್ಲವ ಸಮುದಾಯಕ್ಕೆ ಆದ್ಯತೆ ನೀಡಿದ್ದ ಬಿಜೆಪಿ, ಜಯಾನಂದ ಅಂಚನ್ ಅವರಿಗೆ ಮಣೆ ಹಾಕಿತ್ತು.
ಈ ಅವಧಿಯ ನಾಲ್ಕನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಪಾಲಿಕೆಯ ಒಟ್ಟ 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14, ಹಾಗೂ ಎಸ್ಡಿಪಿಐ 2 ಸ್ಥಾನಗಳನ್ನು ಹೊಂದಿದೆ.
ಇನ್ನಷ್ಟು ನಿಮ್ಮ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 8 September 23