Harekala Hajabba: ಪ್ರಧಾನಿ ಮೋದಿ ನನ್ನ ಕೈ ಮುಟ್ಟಿ ಮಾತಾಡಿಸಿದರು; ಖುಷಿ ಹಂಚಿಕೊಂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

| Updated By: ಸುಷ್ಮಾ ಚಕ್ರೆ

Updated on: Nov 08, 2021 | 4:22 PM

Padma Shri Award: ಚಹಾ ಕೂಟದಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರನ್ನು ಮಾತನಾಡಿಸಿದೆ. ನನ್ನ ಕೈ ಮುಟ್ಟಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ನಮ್ಮ ಶಾಲಾ-ಕಾಲೇಜು ಅಭಿವೃದ್ಧಿಗೆ ನೆರವು ನೀಡಲು ಕೇಳಿದ್ದೇನೆ ಎಂದು ನವದೆಹಲಿಯಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹೇಳಿದ್ದಾರೆ.

Harekala Hajabba: ಪ್ರಧಾನಿ ಮೋದಿ ನನ್ನ ಕೈ ಮುಟ್ಟಿ ಮಾತಾಡಿಸಿದರು; ಖುಷಿ ಹಂಚಿಕೊಂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ
Follow us on

ನವದೆಹಲಿ: ಕೇಂದ್ರ ಸರ್ಕಾರದಿಂದ ನೀಡಲಾಗುವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ (Padma Shri Award) ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ (Harekala Hajabba) ಕೂಡ ಭಾಜನರಾಗಿದ್ದಾರೆ. ಮಂಗಳೂರಿನಿಂದ (Mangaluru) ನಿನ್ನೆಯೇ ದೆಹಲಿಗೆ ತೆರಳಿದ್ದ ಹರೇಕಳ ಹಾಜಬ್ಬ ಇಂದು ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರಿಂದ ಪದ್ಮಶ್ರೀ ಪ್ರಶಸ್ತಿ (Padma Awards) ಸ್ವೀಕರಿಸಿದ್ದಾರೆ. ಹರೇಕಳ ಹಾಜಬ್ಬ ಅವರ ಸರಳತೆಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾತ್ರವಲ್ಲದೆ ರಾಷ್ಟ್ರಪತಿಗಳು ಕೂಡ ಅಚ್ಚರಿಪಟ್ಟಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಹರೇಕಳ ಹಾಜಬ್ಬ, ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಸಂತೋಷವಾಗಿದೆ. ರಾಷ್ಟ್ರಪತಿಗಳಿಂದ ಈ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ ತಂದಿದೆ. ನನ್ನನ್ನು ಗುರುತಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಚಹಾ ಕೂಟದಲ್ಲಿ ಪ್ರಧಾನಿ‌ ನರೇಂದ್ರ ಮೋದಿಯವರನ್ನು ಮಾತನಾಡಿಸಿದೆ. ನನ್ನ ಕೈ ಮುಟ್ಟಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದೆ. ನಮ್ಮ ಶಾಲಾ-ಕಾಲೇಜು ಅಭಿವೃದ್ಧಿಗೆ ನೆರವು ನೀಡಲು ಕೇಳಿದ್ದೇನೆ. ಈ ಮೊದಲು ‘ನಿಮಗೊಂದು ಸಲಾಂ’ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿದ ಟಿವಿ9 ಸಂಸ್ಥೆಗೆ ಧನ್ಯವಾದಗಳು ಎಂದು ನವದೆಹಲಿಯಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾದ ಹರೇಕಳ ಹಾಜಬ್ಬ ರಸ್ತೆಯ ಬದಿಯಲ್ಲಿ ನಿಂತು ಹಣ್ಣುಗಳನ್ನು ಮಾರಿದ ಹಣದಿಂದ ತಮ್ಮೂರಲ್ಲಿ ಶಾಲೆ ಕಟ್ಟಿದ್ದಾರೆ. 64 ವರ್ಷದ ಹಾಜಬ್ಬ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಆದರೂ ಈಗ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಅಕ್ಷರ ಸಂತ ಎನ್ನಲಾಗುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2020ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ಇಂದು ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಮಂಗಳೂರಿನ ಹರೆಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ಶಿಕ್ಷಣ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಶಿಕ್ಷಣ, ಭಾಷೆಗಳು ಗೊತ್ತಿಲ್ಲದಿದ್ದರೆ ಸಮಾಜದಲ್ಲಿ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಅನುಭವಕ್ಕೆ ಬಂದಿತು. ಹೀಗಾಗಿ, ತನ್ನಂತೆ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ನಿರ್ಧರಿಸಿದ ಅವರು ಕಿತ್ತಳೆ ಮಾರಿದ ಹಣದಿಂದ ಬಡ ಮಕ್ಕಳಿಗಾಗಿ ಊರಿನಲ್ಲಿ ಶಾಲೆ ಕಟ್ಟಿಸಿದರು.

ಇದನ್ನೂ ಓದಿ: ಪುನೀತ್​ಗೆ ಪದ್ಮಶ್ರೀ, ಡಾ. ರಾಜ್​ಕುಮಾರ್‌ಗೆ​ ಭಾರತ ರತ್ನ ಗೌರವ ನೀಡಬೇಕು: ಎಂಪಿ ರೇಣುಕಾಚಾರ್ಯ ಹೇಳಿಕೆ

Padma Awards: ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್; ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ