ಮಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ನಡೆದಿದೆ. ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಭಾನುವಾರ ಸಂಜೆ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿಯಾಗಿದ್ದು 5 ಜನರನ್ನು ಬಂಧಿಸಲಾಗಿದೆ.
ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಹಿಂದೂ-ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ವೀಕೆಂಡ್ ಎಂದು ಮಲ್ಪೆ ಬೀಚ್ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಗುಂಪೊಂದು ಅನ್ಯಕೋಮಿನ ಯುವಕ, ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾಗಿದ್ದಾರೆ. ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಶುರುವಾಗಿ ಅನ್ಯಕೋಮಿನ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಸ್ಥಳದಲ್ಲೇ ಇದ್ದ ಇನ್ಸ್ಪೆಕ್ಟರ್ ಶರೀಫ್ ಎದುರಲ್ಲೇ ಹಿಂದೂ ಸಂಘಟನೆ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ವೇಳೆ ಇನ್ಸ್ಪೆಕ್ಟರ್ ಶರೀಫ್ ಕಾರಿನ ಮೇಲೆ ಯುವಕರ ಗುಂಪಿನಿಂದ ಆಗುತ್ತಿದ್ದ ದಾಳಿ ತಡೆದು ಜಗಳವನ್ನು ನಿಯಂತ್ರಿಸಿದ್ದಾರೆ. ಸದ್ಯ ಹಿಂದೂ ಸಂಘಟನೆಯ ಐವರನ್ನು ಬಂಧಿಸಲಾಗಿದೆ. ಭಾನುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಐವರ ಬಂಧನ
ಓರ್ವ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಐವರನ್ನು ಬಂಧಿಸಲಾಗಿದೆ. ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ನಂತರ ನಮ್ಮ ಟ್ರಾಫಿಕ್ ಇನ್ಸ್ಪೆಕ್ಟರ್ ಖಾಸಗಿ ಕೆಲಸದ ನಿಮಿತ್ತ ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ನೋಡಿ ಪ್ರಶ್ನಿಸಿದ್ದಾರೆ. ಓರ್ವ ತನಗೆ ಹಲ್ಲೆ ಮಾಡಿದ್ದಾಗಿ ದೂರು ದಾಖಲಿಸಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಅಕ್ರಮ ಮರಳು ಸಾಗಾಟ; ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ
Published On - 9:21 am, Tue, 28 September 21