ಮಂಗಳೂರು: ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಕಾರಣ ನೀಡಿ ಬೆಂಗಳೂರಿನಲ್ಲಿ ಹೋಟೆಲ್, ರೆಸ್ಟೋರೆಂಟ್ಗಳ ಆಹಾರ ಬೆಲೆಯನ್ನು ಇತ್ತೀಚೆಗಷ್ಟೇ ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಮಂಗಳೂರು (Mangaluru) ನಗರದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ 10 ರಷ್ಟು (Hotel Food Price) ಹೆಚ್ಚಿಸಿವೆ. ಗ್ಯಾಸ್, ಬಾಡಿಗೆ ಮತ್ತು ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜಿಲ್ಲೆಯ ಇತರ ಪಟ್ಟಣಗಳ ಹೋಟೆಲ್ಗಳೂ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೆಲವು ಹೋಟೆಲ್‌ಗಳು ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಮೆನುಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತವೆ. ಆದರೆ ಈ ವರ್ಷ ಮೊದಲೇ ಮಾಡಬೇಕಾಗಿ ಬಂದಿದೆ. ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಶೇ 10 ರಷ್ಟು ಹೆಚ್ಚಿಸಲು ಸಂಘವು ನಿರ್ಧರಿಸಿದೆ ಎಂದು ಹೋಟೆಲ್ ಉದ್ಯಮಿ ಮತ್ತು ದಕ್ಷಿಣ ಕನ್ನಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಒಂದು ವರ್ಷದೊಳಗೆ ಎರಡು ಬಾರಿ ಹಾಲಿನ ದರವನ್ನು ಹೆಚ್ಚಿಸಲಾಗಿದೆ ಮತ್ತು ಒಟ್ಟು 6 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದನ್ನು ಹೊರತುಪಡಿಸಿ, ಪ್ರತಿ ವಸ್ತುವಿನ ಬೆಲೆ ಕಳೆದ ವರ್ಷದಲ್ಲಿ ತೀವ್ರ ಏರಿಕೆ ಕಂಡಿದೆ. ಇದಕ್ಕೆ ಪೂರಕವಾಗಿ ಎಲ್‌ಪಿಜಿ ಸಿಲಿಂಡರ್ ಮತ್ತು ವಿದ್ಯುತ್ ದರವನ್ನೂ ಹೆಚ್ಚಿಸಲಾಗಿದೆ. ಇದಲ್ಲದೆ, ಹೋಟೆಲ್‌ಗಳು ತಮ್ಮ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ನೀಡಬೇಕಾಗಿದೆ. ಇದನ್ನೆಲ್ಲ ಪರಿಗಣಿಸಿ ಶೇ 10ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಶೆಣೈ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್; ಯಾವ ತಿಂಡಿಗೆ ಎಷ್ಟು ದರ? ಇಲ್ಲಿದೆ ಪರಿಷ್ಕೃತ ಪಟ್ಟಿ
ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಅನೇಕ ಹೋಟೆಲ್ ಮಾಲೀಕರು ಪರಿಷ್ಕೃತ ಮೆನು ಬೆಲೆಗಳನ್ನು ಜಾರಿಗೆ ತಂದಿಲ್ಲ. ಆದರೆ ದರ ಹೆಚ್ಚಳ ಅವರಿಗೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ನಮ್ಮ ಹೋಟೆಲ್ ಕಾದುನೋಡುವ ನೀತಿಯನ್ನು ಅನುಸರಿಸುತ್ತಿದೆ. ಸಾಮಾನ್ಯವಾಗಿ ಆರ್ಡರ್ ಮಾಡಲಾದ ಕೆಲವು ವಸ್ತುಗಳ ಬೆಲೆಗಳು ಕಡಿಮೆಯಾಗುತ್ತವೆ ಎಂದು ಆಶಿಸಿದೆ. ಆದರೆ, ಹಾಗಾಗಿಲ್ಲ. ನಾವು ಮುಂದಿನ ವಾರದಿಂದ ಶೇ 8 ರಿಂದ 10 ರಷ್ಟು ದರ ಹೆಚ್ಚಳವನ್ನು ಮಾಡಲಿದ್ದೇವೆ ಎಂದು ಬಿಜೈನ ಅನ್ಮೋಲ್ ಫ್ಯಾಮಿಲಿ ವೆಜ್ ರೆಸ್ಟೋರೆಂಟ್‌ನ ವಸಂತ ಕಾಮತ್ ಹೇಳಿದರು.
ಇಂದ್ರ ಭವನ ಮತ್ತು ವಿಶ್ವಭವನ ಹೋಟೆಲ್‌ಗಳ ಮಾಲೀಕ ಪ್ರಕಾಶ್ ಉಡುಪ ಮಾತನಾಡಿ, ತಮ್ಮ ಏಳು ದಶಕಗಳಿಗಿಂತಲೂ ಹಳೆಯದಾದ ಎರಡೂ ಹೋಟೆಲ್‌ಗಳು ಏಪ್ರಿಲ್‌ನಲ್ಲೇ ವಸ್ತುಗಳ ಬೆಲೆಯನ್ನು ಹೆಚ್ಚಿಸಿವೆ. ಲಾಭದ ಪ್ರಮಾಣ ಕಡಿಮೆಯಿದ್ದರೂ ಈಗ ಮತ್ತೆ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಏಪ್ರಿಲ್‌ನಲ್ಲಿ ಕೆಲವು ರೂಪಾಯಿಗಳಷ್ಟು ಬೆಲೆ ಹೆಚ್ಚಿಸಿದ್ದೆವು. ಮುಂದಿನ ದಿನಗಳಲ್ಲಿ ಚಹಾ ಅಥವಾ ಕಾಫಿ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ನಾವು ಚಿಂತನೆ ನಡೆಸಲಿದ್ದೇವೆ. ಏಕೆಂದರೆ ಹಾಲಿನ ಬೆಲೆ, ಹಾಗೆಯೇ ಚಹಾ ಅಥವಾ ಕಾಫಿ ಪುಡಿ ದರ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಶೇ 10ರಿಂದ ಶೇ 12ರಷ್ಟಿದ್ದ ಲಾಭಾಂಶ ಈಗ ಶೇ 5ಕ್ಕೆ ಇಳಿಕೆಯಾಗಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಮಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ