ಮಂಗಳೂರು, ಜೂನ್ 26: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನ ಕುತ್ತಾರು ಮದನಿ ನಗರ ಎಂಬಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಬುಧವಾರ ಬೆಳಗ್ಗೆ ನಾಲ್ವರು ದುರ್ಮರಣ ಹೊಂದಿದ್ದಾರೆ. ಈ ಪ್ರದೇಶದಲ್ಲಿ ರಾತ್ರಿ ಇಡೀ ಭಾರಿ ಮಳೆ (Mangaluru Rain) ಸುರಿದಿತ್ತು. ಇದರಿಂದಾಗಿ ಅಬೂಬಕ್ಕರ್ ಎಂಬವರ ಮನೆಯ ಗೋಡೆ ಕುಸಿದುಬಿದ್ದಿದೆ. ಮನೆಯೊಳಗಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ (40) ಹಾಗೂ ಮಕ್ಕಳಾದ ರಿಯಾನಾ ಮತ್ತು ರಿಫಾನ್ ಮೃತಪಟ್ಟಿದ್ದಾರೆ.
ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿತವಾಗಿದ್ದು, ಯಾಸಿರ್ ಮನೆಯ ಗೋಡೆಗೆ ಬಿದ್ದು ಭಾರೀ ಅವಘಡ ಸಂಭವಿಸಿದೆ. ಸದ್ಯ ಮೂವರ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳೀಯರೊಂದಿಗೆ ಎರಡು ಗಂಟೆಗಳ ಕಾಲ ಶ್ರಮಿಸಿ ಬಾಲಕಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಯಾಸಿರ್ ಬಂದರಿನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಊಟ ಮುಗಿಸಿ ಕುಟುಂಬಸ್ಥರು ಮಲಗಿದ್ದು, ಮುಂಜಾನೆ ಪೋಷಕರು ಮತ್ತು ಹೆಣ್ಣು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ ಸುರಿದ ಮಳೆಗೆ ಯಾಸಿರ್ ಅವರ ಮನೆಯ ಮೇಲೆ ಕಾಂಪೌಂಡ್ ಗೋಡೆ ಹಾಗೂ ಎರಡು ಅಡಿಕೆ ಮರಗಳು ಬಿದ್ದಿವೆ. ರಿಹಾನಾ ಮತ್ತು ರಿಫಾನ್ ನಗರದ ಖಾಸಗಿ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇದನ್ನೂ ಓದಿ: ಹೆಚ್ಚಾದ ಡೆಂಗ್ಯೂ ಪ್ರಕರಣಗಳು; ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ
ಯಾಸಿರ್ ಆರು ವರ್ಷಗಳ ಹಿಂದೆ ಮನೆಯನ್ನು ಖರೀದಿಸಿ, ಅದನ್ನು ಒಂದು ವರ್ಷಕ್ಕೆ ಬಾಡಿಗೆಗೆ ನೀಡಿದ್ದರು. ಆರು ತಿಂಗಳ ಹಿಂದೆ ಅವರೇ ವಾಸಕ್ಕೆ ಮರಳಿದ್ದರು. ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಇದೇ ರೀತಿಯ ಗೋಡೆ ಕುಸಿತದ ಘಟನೆ ಸಂಭವಿಸಿತ್ತು. ಆದರೆ ಅದೃಷ್ಟವಶಾತ್, ಆ ಸಮಯದಲ್ಲಿ ಯಾರಿಗೂ ಹಾನಿಯಾಗಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Wed, 26 June 24