ಅರಣ್ಯ ಅಧಿಕಾರಿಗಳಿಂದ ಅಕ್ರಮ ಮನೆ ಧ್ವಂಸ, ಸಚಿವರಿಗೆ ಕರೆ ಮಾಡಿ ಶಾಸಕ ಹರೀಶ್ ಪೂಂಜ ಗರಂ

| Updated By: ಆಯೇಷಾ ಬಾನು

Updated on: Oct 08, 2023 | 12:25 PM

ಬೆಳ್ತಂಗಡಿಯ ಕಳೆಂಜ ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಮನೆಯನ್ನ ಧ್ವಂಸಗೊಳಿಸಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ಹರೀಶ್ ಪೂಂಜ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಅರಣ್ಯ ಅಧಿಕಾರಿಗಳಿಂದ ಅಕ್ರಮ ಮನೆ ಧ್ವಂಸ, ಸಚಿವರಿಗೆ ಕರೆ ಮಾಡಿ ಶಾಸಕ ಹರೀಶ್ ಪೂಂಜ ಗರಂ
ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಹರೀಶ್ ಪೂಂಜ
Follow us on

ಮಂಗಳೂರು, ಅ.08: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿದ ಹಿನ್ನಲೆ ಅರಣ್ಯ ಇಲಾಖೆಯು ಫೌಂಡೇಶನ್‌ ಸಮೇತ ಮನೆಯನ್ನ ಧ್ವಂಸಗೊಳಿಸಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ (Harish Poonja) ದೌಡಾಯಿಸಿದ್ದು ಮನೆ ಕಟ್ಟಿದವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಮನೆ ಧ್ವಂಸಗೊಳಿಸಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು ಅರಣ್ಯ ಸಚಿವರಿಗೆ ಕರೆ ಮಾಡಿ ಗುಡುಗಿದ್ದಾರೆ. ಆದರೆ ಮತ್ತೊಂದೆಡೆ ಶಾಸಕ ಹರೀಶ್ ಪೂಂಜ ಸೂಚನೆಯ ಮೇರೆಗೆ ಮತ್ತೆ ಮನೆ ಕಟ್ಟಿದವರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿಯ ಕಳೆಂಜ ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಮನೆಯನ್ನ ಧ್ವಂಸಗೊಳಿಸಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ಹರೀಶ್ ಪೂಂಜ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರೊಂದಿಗೆ ಮತ್ತೆ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಅಧಿಕಾರಿಗಳೊಂದಿಗೆ ಶಾಸಕನ ವಾಗ್ವಾದ ನಡೆದಿದೆ. ಬಡವರಿಗೋಸ್ಕರ ಇಂತಹ ನೂರು ಮನೆ ಕಟ್ಟಿಸುತ್ತೇನೆ. ನನ್ನ ವಿರುದ್ಧ ಎಫ್​ಐಆರ್ ಹಾಕಿ. ನನ್ನನ್ನ ಅರೆಸ್ಟ್ ಮಾಡಿ. ನಾಲ್ಕು ತಿಂಗಳಲ್ಲ, ವರ್ಷ ಬೇಕಾದರೂ ನಾನು ಜೈಲಲ್ಲಿ ಕೂರುತ್ತೇನೆ. ಅನಧಿಕೃತವಾಗಿ ಬಂದು ನೀವು ರೌಡಿಸಂ ಮಾಡ್ತಾಯಿದ್ದೀರಾ? ಸರಕಾರ ನಿಮಗೆ ಬಡವರ ಮನೆ ತಗೀರಿ ಎಂದು ಹೇಳಿಕೊಟ್ಟಿದ್ಯಾ? ಇದು ನಿಮ್ಮ ಪ್ರಾಪರ್ಟಿ ಅಲ್ಲ. ನೀವು ನಿಮ್ಮ ಪ್ರಾಪರ್ಟಿ ರಕ್ಷಣೆ ಮಾಡಿ‌ ಎಂದು ಅರಣ್ಯ ಅಧಿಕಾರಿಗಳಿಗೆ ಪೂಂಜ ತಾಕೀತು ಮಾಡಿದ್ದಾರೆ.

ಯೂನಿಫಾರ್ಮ್ ಹಾಕದ ಅರಣ್ಯ ಅಧಿಕಾರಿಗೆ ಪೂಂಜ ಕ್ಲಾಸ್

ಇನ್ನು ಯೂನಿಫಾರ್ಮ್ ಹಾಕದ ಆರ್​ಎಫ್​ಓ ವಿರುದ್ದವೂ ಪೂಂಜ ಗರಂ ಆದರು. “ಸ್ಪಾಟ್​ಗೆ ಯೂನಿಫಾರ್ಮ್ ಹಾಕ್ದೆ ಹೇಗ್ ಬಂದ್ರಿ. ಮದುವೆ ಮನೆಗೆ ಬಂದಿರೋದೇನ್ರಿ ಎಂದು ಅಧಿಕಾರಿ ವಿರುದ್ಧ ಹೌಹಾರಿದರು. ಯುನಿಫಾರ್ಮ್ ಹಾಕಿಲ್ಲ ಸಸ್ಪೆಂಡ್ ಮಾಡಿ ಎಂದು ಎಸಿಎಫ್​ಗೆ ಆಗ್ರಹಿಸಿದರು. ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಶಾಸಕ ಹರೀಶ್ ಪೂಂಜಾ ಫೋನ್ ಮಾಡಿದರು. ಯಥಾ ಸ್ಥಿತಿ ಕಾಪಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. ಹಿರಿಯ ಅಧಿಕಾರಿಗಳ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ವೈದ್ಯನ ನಿರ್ಲಕ್ಷ್ಯದಿಂದ ಯುವತಿಯ ಸೇನೆ ಸೇರುವ ಕನಸು ನುಚ್ಚುನೂರು, ನೆರವಿಗಾಗಿ ಅಂಗಲಾಚಿದ ಕುಂದಾಪುರದ ಚೈತ್ರಾ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಹರೀಶ್ ಪೂಂಜ, 150 ವರ್ಷದಿಂದ ಇಲ್ಲಿ ಸುಮಾರು 250 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಮನೆ ಅಡಿ ಸ್ಥಳದ ಹಕ್ಕು ಪತ್ರ ನೀಡಬೇಕು ಎಂದು ಇಲ್ಲಿನ ನಿವಾಸಿಗಳ ಆಗ್ರಹವಿತ್ತು. ಅರಣ್ಯ ಇಲಾಖೆಯ ಅಡ್ಡಿಯಿಂದ ಹಕ್ಕು ಪತ್ರ ನೀಡಲು ಸಾಧ್ಯವಾಗಿರಲಿಲ್ಲ. 6500 ಎಕ್ರೆಗೂ ಹೆಚ್ಚಿನ ಪ್ರದೇಶವನ್ನು ಅರಣ್ಯ ಇಲಾಖೆ ಎಂದು ಗುರುತು ಮಾಡಿ. ಅರಣ್ಯ ಇಲಾಖೆಗೆ ಸೇರಿಸುವಂತಹ ವ್ಯವಸ್ಥಿತ ಷಡ್ಯಂತ್ರ ಮಾಡಿದ್ರು. ಹೊಸ ಮನೆ ಕಟ್ಟಿಸಬೇಕು ಎಂದವರಿಗೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲಿರುವ ದೇವಣ್ಣ ಎಂಬುವವರ ಮನೆಯನ್ನ ಧ್ವಂಸ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ, ಬಡವರಿಗೆ ತೊಂದರೆ ಕೊಡಬೇಡಿ. ಪೂರ್ತಿ ಮನೆಯನ್ನ ಧ್ವಂಸ ಮಾಡಿದ್ದಾರೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಲಿ. ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲ್ಲವೆನ್ನುವ ಭರವಸೆ ಇದೆ. ಗಡಿ ಗುರುತು ಮಾಡಿ ಇವರಿಗೆ ಬೇರೆಯೇ ಜಾಗವನ್ನ ಬಿಟ್ಟುಕೊಡಿ. ಹಕ್ಕು ಪತ್ರವನ್ನ ನೀಡಲು NOC ಯನ್ನು ಅರಣ್ಯ ಇಲಾಖೆಯೇ ನೀಡಬೇಕು ಎಂದರು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಶಾಸಕ ಹರೀಶ್ ಪೂಂಜ ಸೂಚನೆಯ ಮೇರೆಗೆ ಮತ್ತೆ ಮನೆ ಕಟ್ಟಿದವರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅರಣ್ಯಾಧಿಕಾರಿಗಳು ದೂರು ದಾಖಲಿಸಿದ್ದಾರೆ. ಅರಣ್ಯಾಧಿಕಾರಿ ಜಯಪ್ರಕಾಶ್ ಹನ್ನೊಂದು ಮಂದಿ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದಾರೆ. ಮನೆಯ ಮಾಲೀಕ ಲೋಲಾಕ್ಷ, ಹರೀಶ ಕೋಯಿಲಾ, ಪ್ರಸನ್ನ ಮಾಣಿಗೇರಿ, ಯಶವಂತ ಗೌಡ, ನೋಣಯ್ಯ ಗೌಡ, ಜನಾರ್ದನ ಗೌಡ ಕುದ್ದ, ಪದ್ಮನಾಭ ಗೌಡ ಕುದ್ದ, ಧನಂಜಯ ಗೌಡ ಬಂಡೇರಿ, ರಾಮಚಂದ್ರ ಮೇಸ್ತ್ರಿ, ಶ್ರೀನಿವಾಸ ಗೌಡ ಕುದ್ದ ಮತ್ತು ಉದಯ ಗೌಡ ಕುದ್ದ ವಿರುದ್ಧ ದೂರು ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ