ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷ; ಉದ್ಯೋಗಕ್ಕಾಗಿ ಇಸ್ರೇಲ್ನಲ್ಲಿ ಸಿಲುಕಿದ ಕರಾವಳಿಯ ಸಾವಿರಾರು ಜನ
ಉದ್ಯೋಗ ನಿಮಿತ್ತ ಕರಾವಳಿಯ ಸಾವಿರಾರು ಜನ ಇಸ್ರೇಲ್‌ಗೆ ತೆರಳಿದ್ದು ಭೀಕರ ಯುದ್ದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಮಂಗಳೂರು, ಉಡುಪಿಯ ಸಾವಿರಾರು ಜನರು ಇಸ್ರೇಲ್ನಲ್ಲಿ ಸಿಲುಕಿದ್ದಾರೆ. ಇಸ್ರೇಲ್ನಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಅವಲೋಕಿಸಿ ಕರಾವಳಿಯ ಕುಟುಂಬಗಳು ಆತಂಕದಲ್ಲಿವೆ.
ಮಂಗಳೂರು, ಅ.09: ಕಳೆದ ಮೂರು ದಿನಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ಸಂಘರ್ಷ ನಡೆಯುತ್ತಿದೆ (Israel-Hamas Conflict). ಎರಡೂ ದೇಶಗಳಿಂದ ದಾಳಿ-ಪ್ರತಿ ದಾಳಿ, ಸಾವು-ನೋವು ಸಂಭವಿಸುತ್ತಿದೆ. ದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪ್ಯಾಲೆಸ್ತೇನ್‌ನ ಹಮಾಸ್ ಉಗ್ರರ ಗುಂಪಿನ ದಾಳಿಯಿಂದಾಗಿ ಇಸ್ರೇಲ್‌ನ 700ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಹಮಾಸ್ ಉಗ್ರರು ಇಸ್ರೇಲ್ ನಾಗರಿಕರ ಗುರಿಯಾಗಿಸಿ ರಾಕೆಟ್ ಉಡಾಯಿಸುತ್ತಿದ್ದಾರೆ. ಇಸ್ರೇಲ್ ಒಳಗೆ ಸಾವಿರಾರು ಹಮಾಸ್ ಉಗ್ರರು ನುಗ್ಗಿದ್ದು ಪಶ್ಚಿಮ ಇಸ್ರೇಲ್ ಪ್ರದೇಶಗಳ ರಸ್ತೆಗಳಲ್ಲಿ ಭಾರೀ ಗನ್ ಬ್ಯಾಟಲ್ ನಡೆಯುತ್ತಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದೆಲ್ಲದರ ನಡುವೆ ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯರ ಕುಟುಂಬಗಳು ಕಣ್ಣೀರಿಡುತ್ತಿವೆ.
ಹೌದು, ಉದ್ಯೋಗ ನಿಮಿತ್ತ ಕರಾವಳಿಯ ಸಾವಿರಾರು ಜನ ಇಸ್ರೇಲ್‌ಗೆ ತೆರಳಿದ್ದು ಭೀಕರ ಯುದ್ದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಮಂಗಳೂರು, ಉಡುಪಿಯ ಸಾವಿರಾರು ಜನರು ಇಸ್ರೇಲ್ನಲ್ಲಿ ಸಿಲುಕಿದ್ದಾರೆ. ಇಸ್ರೇಲ್ನಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಅವಲೋಕಿಸಿ ಕರಾವಳಿಯ ಕುಟುಂಬಗಳು ಆತಂಕದಲ್ಲಿವೆ. ಕಳೆದ 16 ವರ್ಷಗಳಿಂದ ಇಸ್ರೇಲ್‌ನ ಟಲ್ ಅವೀವ್ ಎಂಬಲ್ಲಿ ಪ್ರವೀಣ್ ಪಿಂಟೋ ಎಂಬುವವರು ನೆಲೆಸಿದ್ದು, ಮಂಗಳೂರಿನಲ್ಲಿರುವ ಪ್ರವೀಣ್ ಪಿಂಟೋ ಕುಟುಂಬ ಆತಂಕದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ದಾಬಸ್ ಕಟ್ಟೆ ಎಂಬಲ್ಲಿರುವ ಪ್ರವಿಣ್ ಪಿಂಟೋ ಕುಟುಂಬಸ್ಥರು ದೂರವಾಣಿ ಮೂಲಕ ಪ್ರವೀಣ್ ಅವರ ಸುರಕ್ಷತೆ ಖಾತರಿ ಪಡೆಸಿಕೊಳ್ಳುತ್ತಿದ್ದಾರೆ. ಪ್ರವೀಣ್ ಪಿಂಟೋ ಅವರು ಬಂಕರ್ನಲ್ಲಿ ಸುರಕ್ಷಿತ ವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಮನೆಯಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಪ್ರವೀಣ್ ಪತ್ನಿ ನೀತಾ ಅವರು ಅರ್ಧ, ಒಂದು ಗಂಟೆಗೊಮ್ಮೆ ಕರೆ ಮಾಡಿ ಪತಿಯ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಇದನ್ನೂ ಓದಿ: Afghanistan Earthquakes: ಅಫ್ಘಾನಿಸ್ತಾನದ ಸರಣಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,400ಕ್ಕೆ ಏರಿಕೆ
ಇನ್ನು ಈ ಬಗ್ಗೆ ಮಾತನಾಡಿರುವ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಇಸ್ರೇಲ್ನಲ್ಲಿ ನಮ್ಮವರಿಗೆ ಸಮಸ್ಯೆಯಾದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಪರಿಸ್ಥಿತಿ ಅವಲೋಕನ ಮಾಡಿ ಇನ್ನೆರಡು ದಿನದಲ್ಲಿ ಮಾಹಿತಿ ಬರಬಹುದು. ಸ್ಥಳೀಯವಾಗಿ ಕೂಡ ಯಾವುದೇ ಸಮಸ್ಯೆಗಳು ಆದ ಬಗ್ಗೆ ಸ್ಥಳೀಯರು ಯಾರು ಮಾಹಿತಿ ಕೊಟ್ಟಿಲ್ಲ. ಸರಕಾರ ಅಥವಾ ರಾಯಭಾರಿ ಕಚೇರಿಯಿಂದ ಇವರಿಗೆ ಜಿಲ್ಲಾಧಿಕಾರಿ ಕಚೇರಿಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಸರ್ಕಾರದ ನಿರ್ದೇಶನದಂತೆ ಉಡುಪಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಇಸ್ರೇಲ್ ನಲ್ಲಿ ಸಂಕಷ್ಟದಲ್ಲಿ ಇದ್ದರೆ ರಾಯಭಾರಿ ಕಚೇರಿಯನ್ನು ಸಂಪರ್ಕ ಮಾಡಬಹುದು. ಕುಟುಂಬದವರು ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯನ್ನು ತಿಳಿಸಬಹುದು. ಉಡುಪಿ ಜಿಲ್ಲಾಡಳಿತ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತದೆ. ಇಸ್ರೇಲ್ ನಲ್ಲಿ ಎಷ್ಟು ಜನ ಇದ್ದಾರೆ ಅಥವಾ ಸುತ್ತಮುತ್ತಲ ದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನಮ್ಮಗೆ ಬಂದಿಲ್ಲ. ಉಡುಪಿ ಜಿಲ್ಲಾ ಆಡಳಿತದ ಬಳಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ಇದೆ. ಜಿಲ್ಲಾಡಳಿತ ಕಂಟ್ರೋಲ್ ರೂಂ ಸಿಬ್ಬಂದಿಗೆ ಸೂಚನೆಯನ್ನು ಕೊಟ್ಟಿದೆ. ಈವರೆಗೆ ಉಡುಪಿ ಜಿಲ್ಲೆಯಿಂದ ಯಾವುದೇ ಕುಟುಂಬ ನಮ್ಮನ್ನು ಸಂಪರ್ಕ ಮಾಡಿಲ್ಲ. ಉಡುಪಿ ಜಿಲ್ಲೆಯಿಂದ ಹೋಂ ನರ್ಸ್, ನರ್ಸ್ ಗಳಾಗಿ ಕೆಲಸಕ್ಕೆ ತೆರಳಿರಬಹುದು ಎಂದರು.
ಹಮಾಸ್ ಬಂಡುಕೋರರು, 5,000ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿ 700ಕ್ಕೂ ಹೆಚ್ಚು ಮಂದಿ ಇಸ್ರೇಲಿಯನ್ನರು ಬಲಿ ಪಡೆದಿದ್ದಾರೆ. ಜೊತೆಗೆ ನೂರಾರು ಮಂದಿಯನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇದ್ರಿಂದ ಸಿಟ್ಟಿಗೆದ್ದ ಇಸ್ರೇಲ್, ಆಪರೇಷನ್ ಖಡ್ಗ ಹೆಸರಲ್ಲಿ ಯುದ್ಧವನ್ನೇ ಸಾರಿದೆ.
ಇಸ್ರೇಲ್‌ಗೆ ಅಮೆರಿಕ ನೆರವು ನೀಡ್ತಿದೆ. ನಿಮ್ಮನ್ನ ನಾಮಾವಶೇಷ ಮಾಡ್ತೀವಿ ಎಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಗುಡುಗಿದ್ದಾರೆ. ನಿನ್ನೆ ವಾಯುಪಡೆಯ ಕಂಟ್ರೋಲ್ ಸೆಂಟರ್ನಲ್ಲಿ ಮೀಟಿಂಗ್ ಮಾಡಿದ ಬೆಂಜಮಿನ್, ಹಮಾಸ್ ಬಂಡುಕೋರರನ್ನ ಸದೆಬಡಿಯುವಂತೆ ಸಂಕಲ್ಪ ಮಾಡಿದ್ದಾರೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:47 am, Mon, 9 October 23