ದಕ್ಷಿಣ ಕನ್ನಡ, ಅ.05: ಧರ್ಮ ದ್ವೇಷದ ಭಾಷಣ ಆರೋಪದಡಿ ಮಂಗಳೂರಿನ(Mangalore) ಪ್ರತಿಷ್ಠಿತ ಕಾಲೇಜಿನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು, ಮಂಗಳೂರು ಸೆನ್ ಪೊಲೀಸರು ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರಿನ ಉಳ್ಳಾಲ ತಾಲೂಕಿನ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಭಾಷಣ ಮಾಡಿದ್ದ ಡಾ.ಅರುಣ್ ಉಳ್ಳಾಲ್, ಬೇರೆ ಧರ್ಮಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿದ ಆರೋಪದ ಹಿನ್ನಲೆ ಕೇಸ್ ದಾಖಲಾಗಿದೆ.
ಬಾಷಣ ಮಾಡುತ್ತಾ ‘ಹಿಂದುಗಳು ಹಿಂದು ಮಾಲಿಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು. ಹಿಂದು ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು. ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ ಎಂದು ಅರುಣ್ ಉಳ್ಳಾಲ್ ಅವರು ಹೇಳಿದ್ದರು.
ಇದನ್ನೂ ಓದಿ:ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ
ಈ ಹಿನ್ನಲೆ ಧರ್ಮ ದ್ವೇಷದ ಭಾಷಣ ಮಾಡಿದ ಅರೋಪದಡಿ ಡಾ. ಅರುಣ್ ಉಳ್ಳಾಲ್ ವಿರುದ್ದ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 66(C) IT ACT AND 196, 351 (BNS), 2023 ರಂತೆ ಪ್ರಕರಣ ದಾಖಲಾಗಿದೆ. ಇನ್ನು ಅರುಣ್ ಉಳ್ಳಾಲ್ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಿದ್ದು, ಭಾಷಣದ ವಿಡಿಯೋ ವೈರಲ್ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಎಡಪಂಥೀಯರು ಹಾಗೂ ಅನ್ಯ ಧರ್ಮೀಯ ಸಂಘಟನೆಗಳಿಂದ ವಿರೋಧದ ಬೆನ್ನಲ್ಲೇ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ