ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ; ನಾಳೆಯಿಂದ ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 04, 2024 | 4:55 PM

ರಾಜ್ಯದಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದೆ. ಕಡಲನಗರಿ ಮಂಗಳೂರಿನಲ್ಲೂ ನೀರಿನ ಕೊರತೆ ಕಂಡುಬಂದಿದೆ. ಮಂಗಳೂರು ನಗರಕ್ಕೆ ನೀರು ಪೊರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ನಾಳೆ(ಮೇ.05)ಯಿಂದ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿರ್ಧಾರವನ್ನು ಮಾಡಿದೆ.

ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ; ನಾಳೆಯಿಂದ ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು
ನಾಳೆಯಿಂದ ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು
Follow us on

ದಕ್ಷಿಣ ಕನ್ನಡ, ಮೇ.04: ಕರಾವಳಿಯಲ್ಲೀಗ ಬಿಸಿಲ ಝಳ ಹೆಚ್ಚುತ್ತಿದೆ. ಬೇಸಿಗೆಯ ಬೇಗೆಯಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಅಂಜುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ತಾಪಮಾನ ಏರಿಕೆಯಿಂದಾಗಿ ಬಾವಿ, ನದಿಗಳಲ್ಲಿಯೂ ನೀರು ಬತ್ತಿ(Water Crisis) ಹೋಗಿದೆ. ಅದರಲ್ಲೂ ಕರಾವಳಿಯ ಜೀವನದಿ ನೇತ್ರಾವತಿಯ ಒಡಲಲ್ಲಿ ನೀರಿನ ಮಟ್ಟ ಸಾಕಷ್ಟು ಕುಸಿದಿದೆ. ಹೀಗಾಗಿ ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿಯೂ ನೀರಿಗೆ ಬರಬಂದಿದೆ. ಡ್ಯಾಮ್‌‌‌ನಲ್ಲಿ ನೀರಿನ ಮಟ್ಟ 4.20ಕ್ಕೆ ಇಳಿಕೆಯಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು(Mangaluru) ನಗರಕ್ಕೆ ನಾಳೆಯಿಂದ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.

ದಕ್ಷಿಣಕನ್ನಡ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರು ಅನಗತ್ಯ ನೀರು ಪೋಲು ಮಾಡದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ ಮಾಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ತುಂಬೆ ಡ್ಯಾಂ‌ನಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಂಗಳೂರು ನಗರಕ್ಕೆ ಪ್ರತೀ ದಿನ ಸುಮಾರು 160 ಎಂ.ಎಲ್.ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತೆ. ಸದ್ಯ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ಮಾಡುವುದರಿಂದ ನಿತ್ಯ ಸುಮಾರು 40ರಿಂದ 50 ಎಂ.ಎಲ್.ಡಿ ನೀರು ಉಳಿಕೆಯಾಗಲಿದೆ.

ಇದನ್ನೂ ಓದಿ:ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ; ನಗರಸಭೆಯಿಂದ ಮಹತ್ವದ ನಿರ್ಧಾರ

ಸದ್ಯ ಎ.ಎಂ.ಆರ್ ಮತ್ತು ಬಿಳಿಯೂರು ಡ್ಯಾಂನಲ್ಲಿರುವ ನೀರಿನ ಸಂಗ್ರಹದ ಲೆಕ್ಕಚಾರದಂತೆ ಜೂನ್ ಮೊದಲ ವಾರದವರೆಗೆ ಕುಡಿಯುವ ನೀರಿನ ಪೂರೈಕೆಯನ್ನು ಮ್ಯಾನೇಜ್ ಮಾಡಬಹುದಾಗಿದೆ. ಇದರ ಜೊತೆ ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದಲ್ಲಿರುವ ನೀರನ್ನು ಸಹ ಡ್ಯಾಂಗೆ ಮತ್ತೆ ಪಂಪಿಂಗ್ ಮಾಡುವ ಕೆಲಸವು ನಡೆಯುತ್ತಿದೆ. ಹೀಗಾಗಿ ನೀರನ್ನು ಗಾರ್ಡನಿಂಗ್‌ಗೆ, ವಾಹನ ತೊಳೆಯುವುದಕ್ಕೆ ಬಳಸಿದ್ರೆ ಅಂತವಹರ ವಿರುದ್ದ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಜೂನ್ ಮೊದಲ ವಾರದೊಳಗೆ ಮುಂಗಾರು ಬಂದ್ರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ಶೀಘ್ರ ವರುಣ ದೇವ ಕೃಪೆ ತೋರಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Sat, 4 May 24