ಮಂಗಳೂರು ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ; ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಮಾಹಿತಿ
ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತೆ. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಸಿಕ್ಕಿದೆ.
ಮಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಮಳಲಿಯ ಮಸೀದಿ (Malali Masjid) ಸ್ಥಳದಲ್ಲಿ ಇಂದು (ಮೇ 25) ತಾಂಬೂಲ ಪ್ರಶ್ನೆ ನಡೆಸಲಾಗಿದೆ. ತಾಂಬೂಲ ಪ್ರಶ್ನೆ (Tambula Preshne) ವೇಳೆ ಕೇರಳದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಕೆಲ ಮಾಹಿತಿ ನೀಡಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದಿದ್ದಾರೆ. ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತೆ. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಗುರು ಪೀಠ ಇತ್ತು ಎಂದು ತಾಂಬೂಲ ಪ್ರಶ್ನೆಯಲ್ಲಿ ಬರುತ್ತಿದೆ. ಯಾವುದೋ ಒಂದು ಕಾಲದಲ್ಲಿ ದೇವಸ್ಥಾನ ಇತ್ತೆಂದು ತಿಳಿಯುತ್ತಿದೆ. ಈಗ ಮೇಲೆದ್ದು ಬಂದಿದೆ ಎಂದು ತಿಳಿಸಿದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್, ವಿವಾದದಿಂದ ದೇವಸ್ಥಾನ ನಾಶವಾಗಿದೆ ಎಂದು ತಿಳಿದು ಬರುತ್ತಿದೆ. ದೇವರ ಸಾನ್ನಿಧ್ಯ ಇರುವುದು ಕಂಡುಬಂದಿದ್ದು, ಅದು ವಿಸ್ತಾರವಾಗಿದೆ ಎಂದಿದ್ದಾರೆ.
ಹಿಂದೂಗಳಿಗೆ ಸಿಗುವ ಯೋಗವಿದೆ- ಗೋಪಾಲಕೃಷ್ಣ ಪಣಿಕ್ಕರ್: ನಾಶವಾಗಿದ್ದ ಜಾಗದಲ್ಲಿ ಮತ್ತೊಂದು ಸಾನ್ನಿಧ್ಯ ನಿರ್ಮಿಸುವಂತಿಲ್ಲ. ಆ ಜಾಗದಲ್ಲಿ ನಾಶವಾದ ಸಾನ್ನಿಧ್ಯ ಮತ್ತೆ ಸ್ಥಾಪಿಸುವ ಅವಕಾಶ ಇದೆ. ಈಗ ಆ ಸ್ಥಳದಲ್ಲಿ ಇರುವವರಿಗೆ ಸ್ಥಾಪಿಸುವ ಜವಾಬ್ದಾರಿ ಇದೆ. ಈಗ ಎಲ್ಲರೂ ಒಟ್ಟಾಗಿ ಅದನ್ನು ಪುನರ್ ಸ್ಥಾಪಿಸಬೇಕು. ಪುನರ್ ಪ್ರತಿಷ್ಠಾಪನೆ ಆಗಲಿಲ್ಲ ಅಂದ್ರೆ ಈ ಊರಿಗೆ ಕೆಡಕಾಗುತ್ತೆ. ಈ ಹಿಂದೆ ಶೈವ-ವೈಷ್ಣವ ವಿವಾದದ ವೇಳೆ ನಾಶವಾಗಿರಬಹುದು. ಈ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಈಗ ಆ ಸ್ಥಾನ ಹಿಂದೂಗಳಿಗೆ ಸಿಗುವ ಯೋಗವಿದೆ. ಈಗ ಆ ಸ್ಥಳ ಯಾರ ಬಳಿ ಇದೆ ಅವರು ಸಹಕಾರ ಕೊಡಬೇಕು. ಈ ಸ್ಥಳಕ್ಕೆ ಈಗ ದೈವಾನುಗ್ರಹವಾಗಿದೆ. ದೈವಾನುಗ್ರಹ ಸಂಪೂರ್ಣವಾಗಿದ್ದು, ಪ್ರಯತ್ನಕ್ಕೆ ಫಲ ಸಿಗಲಿದೆ ಎಂದು ತಾಂಬೂಲ ತೋರಿಸಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ವಿವರಿಸಿದರು.
ಇದನ್ನೂ ಓದಿ: Schizophrenia: ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿಗೆ ಸ್ಕಿಜೋಫ್ರೇನಿಯಾ
ಮುಸಲ್ಮಾನರಿಗೂ ಒಳ್ಳೆಯದಾಗುತ್ತದೆ- ಗೋಪಾಲಕೃಷ್ಣ ಪಣಿಕ್ಕರ್: ಮುಂದುವರಿದು ಮಾತನಾಡಿದ ಅವರು, ಇಲ್ಲಿನ ಸಾನ್ನಿಧ್ಯಕ್ಕೆ ಯಾವುದೋ ಒಂದು ಮಠದಲ್ಲಿ ಪೂಜಿಸಲ್ಪಡುತ್ತಿದೆ. ಈ ಕ್ಷೇತ್ರದ ಉತ್ತರ ದಿಕ್ಕಿನಲ್ಲಿ ಗುರುವೊಬ್ಬ ತಪಸ್ಸು ಮಾಡಿದ ಕ್ಷೇತ್ರವು ಇದೆ. ಯಾವುದೋ ಒಂದು ಸಂಘರ್ಷದ ಕಾಲಘಟ್ಟದಲ್ಲಿ ಈ ಕ್ಷೇತ್ರ ಕಳೆದುಹೋಗಿದೆ. ಶೈವ ವೈಷ್ಣವ ಸಂಘರ್ಷದ ಕಾರಣದಿಂದ ಹೀಗಾಗಿರಬಹುದು. ರಾಮಾಯಣದಲ್ಲಿ ರಾಕ್ಷಸರಲ್ಲಿ ಒಳ್ಳೆಯವರೂ ಇದ್ದರು. ಯಾವುದೇ ಒಂದು ಸಮುದಾಯದಲ್ಲಿ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದರೆ ಮುಸಲ್ಮಾನರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿ ತಾಂಬೂಲ ಪ್ರಶ್ನೆ ವಿಸರ್ಜಿಸಿದರು.
ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ತಾಂಬೂಲ ಪ್ರಶ್ನೆಯಲ್ಲಿ ದೈವ ಸಾನಿಧ್ಯ ಅನ್ನೋದು ಪತ್ತೆಯಾಗಿದೆ. ಈ ವಿಚಾರವನ್ನು ನಾವು ಶಾಂತಿಯುತವಾಗಿ ಬಗೆಹರಿಸಿಕೂಳ್ಳುತ್ತೇವೆ. ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ. ಎರಡು ತಿಂಗಳಿನಿಂದ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ಯತ್ನಸಿದ್ದೇವೆ. ಮುಂದೆಯೂ ಇದನ್ನು ಅದೇ ರೀತಿ ಬಗೆಹರಿಸುತ್ತೇವೆ. ನಮ್ಮ ಪಕ್ಷದವರು ಸೇರಿ ಬೇರೆ ಯಾವ ರಾಜಕಾರಣಿಯೂ ಬೇಡ ಎಂದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 25 May 22